ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಮಂಗಳೂರಿನಲ್ಲಿ ಭಯೋತ್ಪಾದಕರ ಪರ ಗೋಡೆ ಬರಹಗಳನ್ನು ಬರೆದು ಭಯ ಹುಟ್ಟಿಸುವ ಪ್ರಯತ್ನ ನಡೆಸುತ್ತಿರುವವರ ಹಿಂದಿರುವ ಶಕ್ತಿಯನ್ನು ಪತ್ತೆ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕಡೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋಡೆಮೇಲೆ ಬರೆದಿರುವುದು ಒಂದು ಭಾಗವಾದರೆ, ಆ ಯೋಚನೆ ಯಾರಲ್ಲಿದೆ. ಯಾರು ಈರೀತಿ ತಲೆ ಕಡಿಯುವ ಮಾತನಾಡುತ್ತಾರೆ ಅವರಿಗೆ ಇದು ಭಾರತ ಎನ್ನುವ ಎಚ್ಚರಿಕೆ ಕೊಡಬೇಕು. ತಕ್ಷಣ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಬೇಕು. ಅವರಿಗೆ ಉಗ್ರವಾದ ಶಿಕ್ಷೆ ಕೊಡಬೇಕು. ಆರೀತಿ ಕಾನೂನು ಕರ್ನಾಟಕದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.
ತಾಲಿಬಾನಿ ಉಗ್ರರು ಸಿರಿಯಾದಲ್ಲಿ ಮಾತ್ರ ಸೀಮಿತವಾಗಿಲ್ಲ. ಅವರು ಮಂಗಳೂರಿನಂತಹ ಕರಾವಳಿ ಜಿಲ್ಲೆಗಳಿಗೂ ಕಾಲಿಡುತ್ತಿದ್ದಾರೆ ಎನ್ನುವುದಕ್ಕೆ ಭಯೋತ್ಪಾಕರ ಪರ ಗೋಡೆ ಬರಹಗಳು ಸಾಕ್ಷಿಯಾಗಿವೆ. ತಪ್ಪು ಮಾಡಿದವನಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೋಡೆ ಬರಹ ಹೇಳುತ್ತಿದೆ. ಇದು ತಾಲಿಬಾನಿಗಳ ಆಲೋಚನೆ ಮತ್ತು ವಾದ ಅದು ಇಂದು ನಮ್ಮ ರಾಜ್ಯಕ್ಕೆ ಬರುತ್ತಿದೆ ಎಂದರು.
ಮಂಗಳೂರಿನಲ್ಲಿ ಎರಡನೇ ಬಾರಿ ಗೋಡೆ ಬರಹ ಮರುಕಳಿಸಿದೆ ಇದು ಪೊಲೀಸ್ಇಲಾಖೆ ವೈಫಲ್ಯವಲ್ಲವೇ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರ ಸಂಖ್ಯೆ ಕಡಿಮೆ ಇರುತ್ತದೆ. ಪದೇ ಪದೇ ಎಲ್ಲಾ ಬೀದಿಗಳಲ್ಲಿ ಓಡಾಲು ಆಗುವುದಿಲ್ಲ. ಮಂಗಳೂರಿನ ಪೊಲೀಸರು ಒಳ್ಳೆ ಕೆಲಸವನ್ನೇ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಂಖ್ಯೆ ಸಾಲದು. ಆದರೂ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದರು.