ಹೊಸ ದಿಗಂತ ವರದಿ,ಮಂಗಳೂರು:
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯೋಜನೆಯನ್ವಯ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನವು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಶುಕ್ರವಾರ ರಾಜ್ಯಾದ್ಯಂತ ಆರಂಭವಾಗಿದ್ದು, ಫೆ.೫ರವರೆಗೆ ಕರ್ನಾಟಕದಾದ್ಯಂತ ನಡೆಯಲಿದೆ.
ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗದಲ್ಲೂ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಭಿಯಾನ ಆರಂಭಗೊಂಡಿತು. ಈ ವೇಳೆ ಎಜೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ,ಕದ್ರಿ ದೇವಸ್ಥಾನದ ತಂತ್ರಿಗಳಾದ ವಿಠ್ಠಲದಾಸ್ ತಂತ್ರಿ ಇವರು ನಿಧಿ ಸಮರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘ ಚಾಲಕ್ ಡಾ.ವಾಮನ್ ಶೆಣೈ, ಮಹಾನಗರ ಸಹ ಸಂಘಚಾಲಕ್, ಸುನಿಲ್ ಆಚಾರ್, ಶಾಸಕರಾದ ವಾದವ್ಯಾಸ ಕಾಮತ್, ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಕಾರ್ಯದರ್ಶಿ ಶಿವನಂದ ಮೆಂಡನ್, ವಿಭಾಗ ಸಂಚಾಲಕ್ ಭುಜಂಗ ಕುಲಾಲ್, ಪಾಲಿಕೆ ಸದಸ್ಯರಾದ ಶಕೀಲಾ ಕಾವಾ, ಮನೋಹರ ಕದ್ರಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.