Wednesday, July 6, 2022

Latest Posts

ಮಂಗಳೂರಿನ ಗೋಡೆ ಬರಹಕ್ಕೆ ಕೇರಳದ ಕುಮ್ಮಕ್ಕು : ಸಂಸದ ಪ್ರತಾಪ ಸಿಂಹ

ಹೊಸ ದಿಗಂತ ವರದಿ ಚಿತ್ರದುರ್ಗ:

ಮಂಗಳೂರಿನಲ್ಲಿನ ಗೋಡೆ ಬರಹ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಗೆ ಕೇರಳದ ಕುಮ್ಮಮ್ಮ ಇರುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಕೃತ್ಯಗಳನ್ನು ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರತಾಪ ಸಿಂಹ ಒತ್ತಾಯಿಸಿದರು.

ಚಿತ್ರದುರ್ಗ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಯಾಸಿನ್ ಭಟ್ಕಳ್ ಹಾಗೂ ರಿಯಾಜ್ ಭಟ್ಕಳ್ ಅವರ ಕೃತ್ಯಗಳಿಂದ ತಿಳಿದುಬಂದಿದೆ. ಈಗ ಮಂಗಳೂರಿನ ಘಟನೆ ನಡೆದಿದೆ. ಇಂತಹ ಘಟನೆಗಳು ಮತ್ತೆ ರಾಜ್ಯದಲ್ಲಿ ನಡೆಯದಂತೆ ಎಚ್ಚರ ವಹಿಸಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಯಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಹಣಕಾಸಿನ ಸ್ಥಿತಿಗತಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯಾವುದೇ ನೈತಿಕತೆ ಇಲ್ಲ. ಕಳೆದ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದ ಅವರು, ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುವಂತೆ ಮಾಡಿದರು. ಆರಂಭದಲ್ಲಿ ೧.೩೬ ಲಕ್ಷ ಕೋಟಿ ಇದ್ದ ಸಾಲದ ಪ್ರಮಾಣವನ್ನು ಅಧಿಕಾರ ಮುಗಿಯುವ ಹೊತ್ತಿಗೆ ೨.೮೬ ಲಕ್ಷ ಕೋಟಿ ಹೆಚ್ಚಿಸಿದರು. ರಾಜ್ಯದ ಜನತೆಯೆ ಮೇಲೆ ಸಾಲದ ಹೊರೆಯನ್ನು ಹೊರಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ತಿರುಗೇಟು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss