ಮಂಗಳೂರು: ನಗರದ ಕೊಟ್ಟಾರದಲ್ಲಿ ಇತ್ತೀಚೆಗೆ ಗೋ ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮೊಹಮದ್ ಹನೀಫ್ ಎಂಬಾತ ಅಂತಾರಾಜ್ಯ ಗೋ ಕಳ್ಳ ಸಾಗಾಟಗಾರನಾಗಿದ್ದಾನೆ. ಈತನ ಮೇಲೆ ಜಿಲ್ಲಾಡಳಿತ ಗೂಂಡಾ ಕಾಯ್ದೆ ಹಾಕಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಆಗ್ರಹಿಸಿದೆ.
ಗೋಕಳ್ಳ ಮೊಹಮದ್ ಹನೀಫ್ ಅಕ್ರಮವಾಗಿ ಗೋವುಗಳನ್ನು ಹತ್ಯೆಮಾಡಿ ಮಾರಾಟ ಮಾಡುವುದರಲ್ಲಿ ನಿಸ್ಸೀಮ. ಕಳೆದ ವರ್ಷ ಜೋಕಟ್ಟೆಯ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ವಶಪಡಿಸಿದ ಗೋವುಗಳನ್ನು ಈತ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಿಂದ ಹಿಂಪಡೆದ ಸಂದರ್ಭ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಕೋಮುಗಲಭೆಗೆ ಪ್ರಚೋದನೆ ನೀಡಿದ್ದ. ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆ ಪ್ರಕರಣಗಳಿದ್ದು ಬ್ರಹ್ಮಾವರ, ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಉಪ್ಪಿನಂಗಡಿ ಮತ್ತು ಪಣಂಬೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದೀಗ ಅಕ್ರಮ ಗೋಸಾಗಾಟದಲ್ಲಿ ಉರ್ವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ ಇಷ್ಟು ಪ್ರಕರಣಗಳಿದ್ದರೂ, ಗೋವುಗಳ ಸಾಗಾಟ ನಿರಂತ ಮಾಡುತ್ತಿರುವುದರಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ನಾನು ಸೂಕ್ತ ದಾಖಲೆ ಹೊಂದಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತಿದ್ದೆ’ ಆರೋಪಿ ಹನೀಫ್ ಪತ್ರಿಕಾ ಹೇಳಿಕೆ ನೀಡಿದ್ದಾನೆ. ಕಾನೂನು ಪ್ರಕಾರ ಯಾವುದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡಬೇಕಾದರೆ, 2006ರ ಸಾರಿಗೆ ತಿದ್ದುಪಡಿ ಕಾಯ್ದೆ 11 ನೇ ತಿದ್ದುಪಡಿ ಪ್ರಕಾರ ಆರ್ಟಿಒದಲ್ಲಿ ಜಾನುವಾರು ಸಾಗಾಟದ ವಾಹನ ಎಂದು ದಾಖಲಾಗಿರಬೇಕು, ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಬೇಕಾದರೆ ವಾಹನದಲ್ಲಿ ಸಾಕಷ್ಟು ಜಾಗವಿರಬೇಕು, ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು, ವಾಹನದ ವೇಗ 24ಕಿಮೀ ಗಂಟೆಗೆ ಮೀರಬಾರದು, ಜಾನುವಾರು ಸಾಗಾಟ ಮಾಡುವಾಗ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದಿರಬೇಕು ಮತ್ತು ಜಾನುವಾರುಗಳು ಸಾಗಾಟ ಯೋಗ್ಯ ಎಂದು ಸರಕಾರಿ ಪಶು ವೈದ್ಯಾಧಿಕಾರಿಯಿಂದ ಸರ್ಟಿಫಿಕೇಟ್ ನೀಡಬೇಕು. ಈ ಯಾವುದೇ ದಾಖಲೆ ಈತನಲ್ಲಿ ಇರಲಿಲ್ಲ. ರಾಣೆಬೆನ್ನೂರಿನ ವೈದ್ಯಾಧಿಕಾರಿ ನೀಡಿ ನಕಲಿ ಪ್ರಮಾಣಪತ್ರ ಈತನಲ್ಲಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಗೋಕಳ್ಳ ಸಾಗಾಣಿಕೆಯ ಜಾಲಕ್ಕೆ ಕಡಿವಾಣ ಹಾಕಿ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನವಾಗುತ್ತಿದೆ. ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ. ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ ಚೀಟಿಗಳನ್ನು ಗೋಕಳ್ಳರು ತಂದು ಕದ್ದ ಜಾನುವಾರುಗಳನ್ನು ಸಕ್ರಮ ಎಂದು ತೋರಿಸುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯವ್ಯಾಪಿ ಜಾನುವಾರು ಸಾಗಾಟಕ್ಕೆ ಆಪ್ ಮಾಡಬೇಕು, ಪ್ರತಿ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳ್ಳ ಸಾಗಾಟ ಮತ್ತು ಹತ್ಯೆ ಪತ್ತೆಹಚ್ಚಲು ವಿಶೇಷ ತಂಡ ರಚಿಸಬೇಕು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದರ ಬಗ್ಗೆ ಬೇಹುಗಾರಿಕೆ ನಡೆಸಿ, ತಾಣ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ ನಡೆಯದಂತೆ ಠಾಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ತಪ್ಪಿದಲ್ಲಿ ಠಾಣಾ ಸಿಬ್ಬಂದಿ/ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳಬೇಕು, ಪೊಲೀಸರು ಮಹಜರನ್ನು ನ್ಯಾಯಯುತವಾಗಿ ಕಾನೂನು ತಜ್ಞರ ಸಹಕಾರದೊಂದಿಗೆ ಬರೆಯಬೇಕು, ಕೇಂದ್ರ ಸರಕಾರ ರಚಿಸಿದ ನಿಯಮಾವಳಿಯಂತೆ ಜಾನುವಾರುಗಳಿಗೆಂದೇ ತಯಾರಾದ ವಿಶೇಷ ಜಾನುವಾರು ವಾಹನದಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡಬೇಕು, ತಪಿದ್ದಲ್ಲಿ ಆರ್ಟಿಒ ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು. ಗೋಕಳ್ಳತನ, ಅಕ್ರಮ ಗೋಸಾಗಾಟ ಜಾಲವನ್ನು ಭೇದಿಸಿ ಗೋವುಗಳನ್ನು ರಕ್ಷಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸುತಿದ್ದೇವೆ ಎಂದು ಶರಣ್ ಪಂಪ್ವೆಲ್ ಹೇಳಿದರು.
ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಪ್ರಮುಖರಾದ ಮನೋಹರ ಸುವರ್ಣ, ಭುಜಂಗ ಕುಲಾಲ್, ನವೀನ್ ಮೂಡುಶೆಡ್ಡೆ, ಪ್ರದೀಪ್ ಸರಿಪಳ್ಳ ಉಪಸ್ಥಿತರಿದ್ದರು.
ಚೀನಾ ನಿರ್ಮಿತ ವಸ್ತುಗಳ ಮಾರಾಟ ಕೈ ಬಿಡಲು ವ್ಯಾಪಾರಸ್ಥರಿಗೆ ವಿಹಿಂಪ ವಿನಂತಿ
ಭಾರತ ಮತ್ತು ಚೀನಾ ಕಣಿವೆಯಲ್ಲಿ ದೇಶರಕ್ಷಣೆಯ ಸಂದರ್ಭ ಭಾರತೀಯ ಸೈನಿಕರ ಹತ್ಯೆಗೈದ ಚೀನಾದ ಕೃತ್ಯವನ್ನು ವಿಶ್ವಹಿಂದ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದರು.
ಗ್ಯಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರು ಕಬ್ಬಿಣದ ಮೊಳೆಗಳಿಂದ ಕೂಡಿದ ದೊಣ್ಣೆಯಿಂದ ನಮ್ಮ ಸೈನಿಕರ ಬರ್ಬರ ಹತ್ಯೆ ನಡೆಸಿರುವುದಕ್ಕೆ ಪ್ರತ್ಯುತ್ತರ ನೀಡಲೇಬೇಕಿದೆ. ಚೀನಾಕ್ಕೆ ಸರಿಯಾಗಿ ಉತ್ತರ ಕೊಡಬೇಕಾದರೆ ಭಾರತದ ಮಾರುಕಟ್ಟೆ ಅವಲಂಬಿಸಿರುವ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಚೀನಾ ಉತ್ಪನ್ನಗಳ ಮಾರಾಟಗಾರು ತಮ್ಮ ಮಳಿಗೆಗಳಲ್ಲಿ ಚೀನಾ ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಸಾರ್ವಜನಿಕರು ಚೀನಾ ನಿರ್ಮಿತ ಮೊಬೈಲ್ ಫೋನ್, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಗೃಹೋಪಯೋಗಿ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು. ಮುಂದಿನ ದಿವಸಗಳಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು.
ಈ ಸಂದರ್ಭ ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬ ಬರಹವುಳ್ಳ ಮಾಸ್ಕ್ ಬಿಡುಗಡೆ ಮಾಡಲಾಯಿತು.