ಮಂಗಳೂರು: ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ವದಂತಿ ಮತ್ತು ತಪ್ಪು ಮಾಹಿತಿ ಹಲವಾರು ಅನಾಹುತಕ್ಕೆ ಕಾರಣವಾಗುತ್ತಿರುವ ವರದಿಗಳ ನಡುವೆ ನಗರದ ಪುರಭವನದ ಮುಂಭಾಗ ಗುರುವಾರ ಐನೂರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಜಮಾವಣೆಗೊಂಡ ಘಟನೆ ನಡೆದಿದೆ.
ಲಾಕ್ ಡೌನ್ನಿಂದ ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಪ್ರಕ್ರಿಯೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಮಧ್ಯೆಯೇ ಮಂಗಳವಾರ ಬೆಳಗ್ಗೆ ನಗರದ ಪುರಭವನದ ಆವರಣದಲ್ಲಿ ನೂರಾರು ವಲಸೆ ಕಾರ್ಮಿಕರು ಜಮಾಯಿಸಿದರು.
ವಿಪರ್ಯಾಸವೆಂದರೆ ಇಲ್ಲಿ ಸುರಕ್ಷಿತ ಅಂತರವಿರಲಿಲ್ಲ. ಹಲವು ವಲಸೆ ಕಾರ್ಮಿಕರು ಮಾಸ್ಕ್ ಧರಿಸದಿದ್ದುದು ಕಂಡು ಬಂತು. ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಯಾರೋ ನೀಡಿದ ಮಾಹಿತಿ ಮೇರೆಗೆ ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಪುರಭವನದ ಬಳಿ ಜಮಾಯಿಸಿದರು.
ಸುರಕ್ಷಿತ ಅಂತರವಿಲ್ಲದೆ ಗುಂಪಾಗಿ ವಲಸೆ ಕಾರ್ಮಿಕರು ಸೇರಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಸ್ಥಳಕ್ಕೆ ತೆರಳಿ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಮದನ್ ಮೋಹನ್, ಯಾರ ಸೂಚನೆಯ ಮೇರೆಗೆ ಕಾರ್ಮಿಕರು ಇಲ್ಲಿ ಜಮಾಯಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೂ ಅವರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಸೋಮವಾರ ಮನಪಾ ವ್ಯಾಪ್ತಿಯ 800ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಕಳಿಸಲಾಗಿದೆ. ಇವರು ನೈಜ ವಲಸೆ ಕಾರ್ಮಿಕರು ಹೌದೋ ಅಲ್ಲವೋ ಎಂದು ಕಾರ್ಮಿಕ ಇಲಾಖೆಯ ಮೂಲಕ ಪರಿಶೀಲನೆ ನಡೆಸಲಾಗುವುದು. ಅವರ ಆರೋಗ್ಯವನ್ನೂ ತಪಾಸಣೆಗೊಳಪಡಿಸಲಾಗುವುದು. ಪ್ರತಿಯೊಂದು ಬಸ್ಸಿನಲ್ಲಿ ಶೇ.40ಮೀರದಂತೆ ವಲಸೆ ಕಾರ್ಮಿಕರನ್ನು ಕಳಿಸಲಾಗುವುದು ಎಂದು ತಿಳಿಸಿದರು.