Thursday, August 11, 2022

Latest Posts

ಮಂಗಳೂರು| ಬೀದಿಬದಿ ವ್ಯಾಪಾರಿಗಳ ಆರ್ಥಿಕ ಪುನ:ಶ್ಚೇತನಕ್ಕೆ ತುರ್ತು ಸಾಲ ಒದಗಿಸಿ: ಜಿಲ್ಲಾಧಿಕಾರಿ ತಾಕೀತು

ಮಂಗಳೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ನಗರ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ತುರ್ತು ಕಿರು ಸಾಲ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಷ್ಟ್ರದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಪರಿಣಾಮವಾಗಿ ಅನೇಕ ಜನರು ಉದ್ಯೋಗ ವಂಚಿತರಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಆರ್ಥಿಕ ಸಹಾಯ ಒದಗಿಸಲು ಪ್ರಧಾನಮಂತ್ರಿ ಬೀದಿ ಬದಿ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸಲು ಅಧಿಕಾರಿಗಳು ಒತ್ತು ನೀಡ ಬೇಕು ಎಂದರು.
ಯೋಜನೆಯನ್ನು ಕಳೆದ ಜೂನ್ ತಿಂಗಳಿನಿಂದ ಜಾರಿಗೆ ತರಲಾಗಿದೆ. ಪ್ರತಿಯೊಂದು ಅರ್ಹ ಫಲಾನುಭವಿಗೆ ರೂ.೧೦,೦೦೦ ಬ್ಯಾಂಕ್ ಸಾಲವನ್ನು ಶೇ.೭ ಬಡ್ಡಿಯಲ್ಲಿ ನೀಡಲಾಗುತ್ತಿದ್ದು, ೧೨ ಕಂತುಗಳಲ್ಲಿ ಮರು ಪಾವತಿ ಮಾಡಬಹುದಾಗಿದೆ. ಯೋಜನೆಯು ಡಿಜಿಟಲ್ ವ್ಯವಹಾರ ಪ್ರೋತ್ಸಾಹಕ್ಕೆ ನೀಡುವುದರೊಂದಿಗೆ ನಿಯಮಿತವಾಗಿ ಸಾಲ ಮರುಪಾವತಿ ಮಾಡಿದರೆ ಬೀದಿ ಬದಿ ವ್ಯಾಪಾರಿಗಳಿಗೆ ರೂ.೧,೨೦೦ ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯು ಮಹಾನಗರ ಪಾಲಿಕೆ. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಅವರುಗಳನ್ನು ಫಲಾನುಭವಿಗಳನ್ನಾಗಿಸಬೇಕೆಂದು ಅಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಹಾ ನಗರಪಾಲಿಕೆಯ ಜಂಟಿ ಆಯುಕ್ತರು ಡಾ|ಸಂತೋಷ್‌ಕುಮಾರ್, ಲೀಡ್ ಬ್ಯಾಂಕ್ ಮೆನೇಜರ್ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss