Tuesday, June 28, 2022

Latest Posts

ಮಂಗಳೂರು| ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶ

ಹೊಸ ದಿಗಂತ ವರದಿ ಮಂಗಳೂರು:

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದ್ದು, ನ.೨೨,೨೯, ಡಿ.೬ ಮತ್ತು ೧೩ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಲ್ಲ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಈಗಾಗಲೇ ನ.೧೮ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಡಿ.೧೭ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸ್ವೀಕರಿಸಲಾಗುವುದು. ಜ.೭ಕ್ಕೆ ಇವುಗಳ ವಿಲೇವಾರಿ ನಡೆಯಲಿದೆ. ಜ.೧೮ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ೨೦೨೧ರ ಜನವರಿ ೧ಕ್ಕೆ ೧೮ ವರ್ಷ ವಯಸ್ಸಾಗಿರಬೇಕು.

ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾರ್ಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ, ಪಾನ್ ಕಾರ್ಡ್‌ನ್ನು ದಾಖಲೆಯಾಗಿ ಒದಗಿಸಬೇಕು, ವಾಸಸ್ಥಳದ ಬಗ್ಗೆ ಪಡಿತರ ಚೀಟಿ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಿಗೆ ಪ್ರತಿ, ಬಾಡಿಗೆ ಕರಾರು ಪತ್ರ ಮುಂತಾದವುಗಳನ್ನು ನೀಡಬಹುದು. ಜತೆಗೆ ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ ನೀಡಬೇಕು ಎಂದರು.

೧೮ ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ ೬ರಲ್ಲಿ ಅರ್ಜಿ ನೀಡಬೇಕು. ಅನಿವಾಸಿ ಭಾರತೀಯರು ಹೆಸರು ಸೇರ್ಪಡೆಗೆ ನಮೂನೆ ೬ ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ -೭, ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು (ಹೆಸರು, ತಂದೆಯ ಹೆಸರು, ವಿಳಾಸ, ವಯಸ್ಸು, ಲಿಂಗ) ತಿದ್ದುಪಡಿ ಮಾಡಲು ನಮೂನೆ -೮, ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭ ನಮೂನೆ -೮ಎಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಡಿಸಿ ತಿಳಿಸಿದರು.

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟುಹೋಗಿದೆ, ವಿಳಾಸ, ವಾರ್ಡ್ ಬದಲಾಗಿದೆ, ವಯಸ್ಸು, ಜನ್ಮದಿನಾಂಕ ಬದಲಾಗಿದೆ ಎಂದು ಮತದಾರರು ಚುನಾವಣೆ ಸಂದರ್ಭ ದೂರುವ ಬದಲಿಗೆ ಈಗ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಿ ಲೋಪದೋಷಗಳಿದ್ದರೆ ಸರಿಪಡಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿಯೂ ಪರಿಶೀಲನೆ ನಡೆಸಬಹುದು. www.ceokarnataka.kar.nic.in , www.nvsp.in , www.dk.nic.in ನಲ್ಲಿ ವಿವರ ಪರಿಶೀಲಿಸಬಹುದು. ಮತದಾರರ ಸಹಾಯವಾಣಿ ೧೯೫೦ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss