Wednesday, August 10, 2022

Latest Posts

ಮಂಗಳೂರು ಮಹಾನಗರ ಪಾಲಿಕೆಯಿಂದ ತ್ಯಾಜ್ಯ ತೆರಿಗೆ ಹೆಚ್ಚಳ: ಕಾಂಗ್ರೆಸ್ ನಿಂದ ಹೋರಾಟದ ಎಚ್ಚರಿಕೆ

ಮಂಗಳೂರು: ಕೊರೋನಾ ಭೀತಿ, ಲಾಕ್‌ಡೌನ್‌ನಿಂದ ಉಂಟಾದ ನಷ್ಟದ ಸಂಕಷ್ಟದಲ್ಲಿರುವ ಜನತೆಗೆ ತ್ಯಾಜ್ಯ ತೆರಿಗೆ ಹೆಚ್ಚಿಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಹೊರೆ ಹೇರಿದೆ. ತ್ಯಾಜ್ಯ ತೆರಿಗೆ ಹೆಚ್ಚಳವನ್ನು ತಕ್ಷಣ ಹಿಂಪಡೆದು, ಹಿಂದಿನಂತೆಯೇ ತೆರಿಗೆ ಸಂಗ್ರಹಿಸಬೇಕು. ಇಲ್ಲವಾದಲ್ಲಿ ಪಾಲಿಕೆಯ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಮನಪಾ ಕಾಂಗ್ರೆಸ್ ಕಾರ್ಪೋರೇಟರ್‌ಗಳು ಎಚ್ಚರಿಸಿದ್ದಾರೆ.
ಮನಪಾದಲ್ಲಿ ೨೦೧೫-೧೬ರಲ್ಲಿ ಮರು ಪರಿಶೀಲನೆ ಮಾಡಿ ಜಾರಿಗೊಳಿಸಲಾಗಿದ್ದ ೫೦೦ ಚದರ ಅಡಿಗೆ ವಾರ್ಷಿಕ ೧೮೦ ರೂ.ಗಳಂತೆ ನಿಗದಿಪಡಿಸಲಾಗಿದ್ದ ತ್ಯಾಜ್ಯ ತೆರಿಗೆಯನ್ನು ಕಳೆದ ಏ. ೧ರಿಂದ ೬೦೦ ರೂ.ಗೆ ಏರಿಕೆ ಮಾಡಲಾಗಿದೆ. ಇದು ಶೇ. ೨೩೧ರಷ್ಟು ಏರಿಕೆಯಾಗಿದೆ ಮನಪಾ ಪ್ರತಿಪಕ್ಷ ನಾಯಕ  ಅಬ್ದುಲ್ ರವೂಫ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊರೋನ ಲಾಕ್‌ಡೌನ್‌ನಿಂದ ಆರ್ಥಿಕ ವ್ಯವಹಾರಗಳು ಸ್ಥಗಿತವಾಗಿದ್ದು, ಜನರು ಸಂಕಷ್ಟದಲ್ಲಿರುವ ಸಂದರ್ಭ ತೆರಿಗೆ ವಿನಾಯಿತಿ ನೀಡುವ ಮೂಲಕ ಜನರಿಗೆ ಸಹಕಾರ ನೀಡಬೇಕಾಗಿದ್ದ ಮನಪಾ ಆಡಳಿತ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ೨೦೧೫-೧೬ರಲ್ಲಿ ೫೦೦ ಚದರ ಅಡಿ ವ್ಯಾಪ್ತಿಯವರೆಗೆ ಮಾಸಿಕ ೩೦ರೂ.ನಂತೆ ವಾರ್ಷಿಕ ೩೬೦ ರೂ. ತ್ಯಾಜ್ಯ ತೆರಿಗೆ ನಿಗದಿಯಾಗಿತ್ತು. ಸಾರ್ವಜನಿಕರಿಂದ ಅದಕ್ಕೆ ವಿರೋಧ ವ್ಯಕ್ತವಾದಾಗ ಅದನ್ನು ಮಾಸಿಕ ೧೫ ರೂ.ಗಳಿಗೆ ನಿಗದಿ ಪಡಿಸಿ ಸಂಗ್ರಹ ಮಾಡಲಾಗುತ್ತಿತ್ತು. ೫೦೦ ಚದರ ಅಡಿಗಿಂತ ಮೇಲ್ಪಟ್ಟ ವಿಸ್ತೀರ್ಣದ ಆಸ್ತಿ ತೆರಿಗೆ ಮೇಲೆ ವಿಭಿನ್ನ  ದರ ಹಾಕಿ ಕಳೆದ ವರ್ಷದ ವರೆಗೂ ತ್ಯಾಜ್ಯ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಏಕಾಏಕಿ  ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತೆರಿಗೆ ಏರಿಕೆ ಮಾಡಲಾಗಿದೆ. ಸದ್ಯ ಈ ತೆರಿಗೆ ವಸೂಲಾತಿ ನಿಲ್ಲಿಸಬೇಕು. ಈಗಾಗಲೇ ಪಾವತಿಸಿದವರಿಗೆ ಮುಂದಿನ ಪಾವತಿಗೆ ಸರಿತೂಗಿಸಬೇಕು. ನೀರಿನ ಶುಲ್ಕದಲ್ಲೂ ಏರಿಕೆ ಮಾಡಲಾಗಿದ್ದು, ಇದನ್ನೂ ಲಾಕ್‌ಡೌನ್ ಸಂದರ್ಭದಲ್ಲಿ ೩ ತಿಂಗಳ ದರವನ್ನು ಮನ್ನಾ ಮಾಡುವಂತೆ ಪಾಲಿಕೆ ಆಡಳಿತವನ್ನು ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಲ್ಯಾನ್ಸ್ ಲಾಟ್ ಪಿಂಟೊ, ಎಸಿ ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಅನಿಲ್ ಕುಮಾರ್, ಅಶ್ರಫ್, ಸಂಶುದ್ದೀನ್, ಝೀನತ್ ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss