ಮಂಗಳೂರು:ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ಕುಮಾರ್ ಹೆಗ್ಡೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಅವರನ್ನು ಆಲಮಟ್ಟಿಯ ಕೃಷ್ಣ ಜಲ ಭಾಗ್ಯ ನಿಗಮದ ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ನೇಮಕ ಮಾಡಿ ಮಂಗಳವಾರ ಆದೇಶಿಸಲಾಗಿದೆ. ಕೃಷ್ಣ ಜಲ ಭಾಗ್ಯನಿಗಮದ ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದ ಕುಪ್ಪೂರಲಿಂಗಯ್ಯ ಅವರನ್ನು ಜಂಟಿ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.
ಅಜಿತ್ಕುಮಾರ್ ಹೆಗ್ಡೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಯಾಗಿದ್ದಾರೆ.
ಕೃಷ್ಣ ಜಲ ಭಾಗ್ಯ ನಿಗಮಕ್ಕೆ ವರ್ಗಾವಣೆಗೊಂಡ ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಅಜಿತ್ಕುಮಾರ್ ಹೆಗ್ಡೆ ಅವರಿಗೆ ಬುಧವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಎಂ.ಶಶಿಧರ ಹೆಗ್ಡೆ, ಉಪಾಯುಕ್ತ ಡಾ.ಸಂತೋಷ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮೇಯರ್ ದಿವಾಕರ ಪಾಂಡೇಶ್ವರ ಆಯುಕ್ತರಾಗಿ ಅಜಿತ್ಕುಮಾರ್ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ತನ್ನ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಮೇಯರ್, ಉಪ ಮೇಯರ್, ಎಲ್ಲಾ ಕಾರ್ಪೊರೇಟರ್ಗಳಿಗೆ ಮತ್ತು ಅಧಿಕಾರಿಗಳಿಗೆ ಅಜಿತ್ಕುಮಾರ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು.