ಮಂಗಳೂರು: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕಡಬ ತಾಲೂಕು ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್. ಅವರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ.
ಫಲಿತಾಂಶ ಪ್ರಕಟಗೊಂಡ ಅನುಷ್ಗೆ ದೂರವಾಣಿ ಕರೆ ಮಾಡಿದ ಸಚಿವರು, ಅನುಷ್ ಅವರ ಶಾಲೆ, ಹೆತ್ತವರು, ಕುಟುಂಬಿಕರ ವಿವರ ಪಡೆದುಕೊಂಡರು. ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳು, ಒಳ್ಳೆಯದಾಗಲಿ, ಇನ್ನೊಮ್ಮೆ ಭೇಟಿಯಾಗೋಣ ಎಂದು ಶುಭ ಹಾರೈಸಿದರು.