ಹೊಸದಿಗಂತ ವರದಿ, ಮಂಗಳೂರು:
ಲವ್ ಜಿಹಾದ್ ತಡೆಗಟ್ಟಲು ರಾಜ್ಯದಲ್ಲಿ ಕಠಿಣ ಕಾನೂನು ರೂಪಿಸುವಂತೆ ವಿಶ್ವಹಿಂದು ಪರಿಷತ್ ಬಜರಂಗದಳ ಮಂಗಳೂರು ಘಟಕ ವತಿಯಿಂದ ದ.ಕ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ದೇಶದಾದ್ಯಂತ ಲವ್ ಜಿಹಾದ್ ಪ್ರಕರಣಗಳು ಅಪಾಯಕಾರಿಯಾಗಿ, ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ದ ಅಮಾಯಕ ಹಿಂದು ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದು ಸಮಾಜಕ್ಕೆ ಆತಂಕವನ್ನುಟುಮಾಡಿದೆ.
ಕರ್ನಾಟಕದಲ್ಲೂ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಹಿಂದು ಸಮಾಜದ ಎಲ್ಲ ಜಾತಿ-ವರ್ಗಗಳ ಮುಗ್ದ ಹೆಣ್ಣುಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯದಲ್ಲಿ ಕೋಮು ಸಂಘರ್ಷ, ಆತ್ಮಹತ್ಯೆ ಹಾಗೂ ಹಲ್ಲೆ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ.
ಕಾಲೇಜ್ ಕ್ಯಾಂಪಸ್, ಮಹಿಳಾ ಹಾಸ್ಟೆಲ್, ಹೋಟೆಲು, ಸಿನಿಮಾ ಮಂದಿರ, ಬ್ಯೂಟಿ ಪಾರ್ಲರ್, ಮೊಬೈಲ್ ಸೆಂಟರ್, ಮಹಿಳೆಯರು ಹೆಚ್ಚಾಗಿ ಆಗಮಿಸುವ ವ್ಯಾಪಾರ ವ್ಯವಹಾರ ಕೇಂದ್ರಗಳು ಮುಂತಾದುವುಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ ಯುವತಿಯರನ್ನು ಕೃತಕ ಪ್ರೇಮ ಪಾಶಕ್ಕೆ ಬಲಿಯಾಗುವಂತೆ ಮಾಡಲಾಗುತ್ತಿದೆ.
ಪ್ರೀತಿ, ಪ್ರೇಮ, ವಿಹಾರ, ಮೋಜು, ಮಸ್ತಿ, ಹೋಟೆಲ್, ಸಿನೆಮಾ ಇತ್ಯಾದಿಗಳಿಂದ ಪ್ರಾರಂಭಗೊಂಡು ಕೊನೆಗೆ, ಒತ್ತಡ ಬೆದರಿಕೆ, ಬ್ಲಾಕ್ ಮೇಲ್, ಅಪಹರಣ ಇತ್ಯಾದಿ ಹಂತದ ವರೆಗೂ ತಲುಪಿ, ಮದುವೆ ಮತಾಂತರ ಕೃತ್ಯಗಳು ನೆಡೆಯುತ್ತಿವೆ.
ಈ ಕರಾಳ ಮುಖಗಳಿಂದ ಕೂಡಿದ, ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಮುಖವಾಡ ಹೊಂದಿದ ಇಸ್ಲಾಮಿಕ್ ಜಿಹಾದ್ನ ಭಾಗವಾಗಿರುವ ಲವ್ ಜಿಹಾದನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ಮುಗ್ದ ಅಮಾಯಕ ಹಿಂದು ಯುವತಿಯರನ್ನು, ಹಿಂದು ಕುಟುಂಬಗಳನ್ನು, ಹಿಂದು ಸಂಸ್ಕೃತಿ, ಸಮಾಜವನ್ನು ಸಂರಕ್ಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗೌಡ, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.