Thursday, July 7, 2022

Latest Posts

ಮಂಗಳೂರು| ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ

ಮಂಗಳೂರು: ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ನೇತೃತ್ವದಲ್ಲಿ ನಗರದ ಬಿಜೈನ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ) ಪ್ರಧಾನ ಕಚೇರಿ ಮುಂಭಾಗ ಮೆಸ್ಕಾಂ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ಕಂಪನಿಗಳ ಖಾಸಗೀಕರಣ ರಾಜ್ಯ ಸರಕಾರ ಮತ್ತು ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರೈತರು, ಬಡಕುಟುಂಬಗಳು ಸೇರಿದಂತೆ ಎಲ್ಲ ಗ್ರಾಹಕರಿಗೆ ಹೊರೆಯಾಗುತ್ತದೆ. ಜುಲೈ ೩ರಂದು ನಡೆದ ವಿವಿಧ ರಾಜ್ಯಗಳ ಇಂಧನ ಸಚಿವರ ಸಭೆಯಲ್ಲಿ ವಿದ್ಯುತ್ (ತಿದ್ದುಪಡಿ) ಕಾಯ್ದೆ ೨೦೨೦ನ್ನು ೧೧ ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. ಆದರ ಹೊರತಾಗಿಯೂ ಕೇಂದ್ರ ಸರಕಾರ ತನ್ನ ಉದ್ದೇಶ ಹೇರಿಕೆ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.

ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರ್‌ಗಳ ಸಂಘದ ಹಿರಿಯ ಉಪಾಧ್ಯಕ್ಷ ಮಂಜಪ್ಪ ಮಾತನಾಡಿ, ನವದೆಹಲಿ, ಮುಂಬೈನಲ್ಲಿ ಈಗಾಗಲೇ ವಿದ್ಯುತ್ ನಿಗಮಗಳನ್ನು ಖಾಸಗಿ ಕ್ಷೇತ್ರಕ್ಕೆ ನೀಡಲಾಗಿದ್ದು, ಸಾರ್ವಜನಿಕರು ದರ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ, ಸಣ್ಣ ಕೈಗಾರಿಕೆಗಳಿಗೆ, ರೈತರ ಪಂಪ್‌ಸೆಟ್‌ಗಳಿಗೆ ರಿಯಾಯಿತಿ, ಉಚಿತ ವಿದ್ಯುತ್ ನೀಡುತ್ತಿದ್ದು, ಖಾಸಗೀಕರಣವಾಗಿದರೆ ದರ ಕಡಿಮೆ ಎನ್ನುವ ಮಾತೇ ಬರುವುದಿಲ್ಲ. ಸರಕಾರ ತಕ್ಷಣ ಉದ್ದೇಶಿತ ಖಾಸಗೀಕರಣ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ, ಇಂಜಿನಿಯರ್‌ಗಳ ಸಂಘದ ಉಪಾಧ್ಯಕ್ಷ ಕೃಷ್ಣ ರಾಜ್, ಲೆಕ್ಕಾಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಮುರಳೀಧರ ನಾಯಕ್, ಪದಾಧಿಕಾರಿ ಸುರೇಶ್, ಎಸ್‌ಸಿ/ಎಸ್‌ಟಿ ಕಲ್ಯಾಣ ಸಂಸ್ಥೆ ಪದಾಧಿಕಾರಿ ಶ್ರೀನಿವಾಸಪ್ಪ, ಡಿಪ್ಲೊಮಾ ಅಸೋಸಿಯೇಶನ್ ಪದಾಧಿಕಾರಿ ಸುನಿಲ್ ಮೊಂತೇರೊ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss