ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪ್ರಯಾಣಿಕನೋರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಬೆಂಗ್ರೆ ಕಸಬಾ ನಿವಾಸಿ ಮುಹಮ್ಮದ್ ಅರ್ಷದ್ ಬಂಧಿತ ಪ್ರಯಾಣಿಕ. ಆರೋಪಿಯು ದುಬೈನಿಂದ ಏರ್ ಇಂಡಿಯಾ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಈತ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಎನ್ನಲಾದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 31,73,920 ರೂ. ಮೌಲ್ಯದ 664 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದು ಪುಡಿ ರೂಪದಲ್ಲಿತ್ತು. ಗಮ್ನಿಂದ ಮಿಶ್ರಣ ಮಾಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ಟಮ್ಸ್ ತಂಡದ ನೇತೃತ್ವವನ್ನು ಕಸ್ಟಮ್ಸ್ನ ಜಿಲ್ಲಾ ಅಧಿಕಾರಿ ಪ್ರವೀಣ್ ಕಂಡಿ ವಹಿಸಿದ್ದರು. ಅಧಿಕಾರಿಗಳಾದ ನರೇಶ್ ಕುಮಾರ್ ಬಿಎಂ, ಬಿಕ್ರಮ್ ಚಕ್ರವರ್ತಿ ಮತ್ತಿತರರು ಸಹಕರಿಸಿದರು.