Wednesday, July 6, 2022

Latest Posts

ಮಂಗಳೂರು| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು

ಎಲ್ಲಾ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣಗಳನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು. ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆಶಾ, ಬಿಸಿಯೂಟ, ಅಂಗನವಾಡಿ ಮುಂತಾದ ಸ್ಕೀಂ ಕಾರ್ಯಕರ್ತೆಯರಿಗೆ ಕಾರ್ಮಿಕ ಸ್ಥಾನ ನೀಡಿ ಅವರಿಗೆ ಕನಿಷ್ಠ ೨೧ ಸಾವಿರ ವೇತನ ನಿಗದಿಗೊಳಿಸಬೇಕು. ಪಿಂಚಣಿ ೬ ಸಾವಿರ ಸಿಗಬೇಕು. ಬೀಡಿ ಕಾರ್ಮಿಕರ ಕನಿಷ್ಠ ವೇತನ ಮತ್ತು ಬಾಕಿ ತುಟ್ಟಿಭತ್ತೆಯನ್ನು ಕೂಡಲೇ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ನೌಕರರ ಯೂನಿಯನ್‌ನ ಜಿಲ್ಲಾ ಮುಖಂಡ ವಿನ್ಸೆಂಟ್ ಡಿಸೋಜ, ದೇಶದಲ್ಲಿ ಪ್ರತಿಷ್ಠಿತ ಬ್ಯಾಂಕ್‌ಗಳನ್ನು ಅನುತ್ಪಾದಕ ಆಸ್ತಿ ಹೊಂದಿರುವವರಿಗೆ ಹಸ್ತಾಂತರಿಸಲಾಗುತ್ತಿದೆ. ಸಾರ್ವಜನಿಕ ವಲಯದ ೨೯ ಬ್ಯಾಂಕ್‌ಗಳನ್ನು ಈಗಾಗಲೇ ವಿಲೀನಿಕರಣ, ಖಾಸಗೀಕರಣ ನೆಪದಲ್ಲಿ ೧೨ಕ್ಕೆ ಇಳಿಸಲಾಗಿದೆ. ಇಲ್ಲಿ ಇಳಿಕೆಯಾಗಿರುವ ಸಂಖ್ಯೆ ಅಲ್ಲ. ಆದರೆ ಅದರಿಂದಾಗಿ ಗ್ರಾಮಾಂತರ ಪ್ರದೇಶ ಸೇರಿದಂತೆ ಸಾಕಷ್ಟು ಶಾಖೆಗಳು ಮುಚ್ಚುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಎಂದರು.

ವಿಲೀನಿಕರಣ ಪ್ರಕ್ರಿಯೆ ಮುಂದುವರಿದಲ್ಲಿ ದೇಶದಲ್ಲಿ 1969ಕ್ಕಿಂತ ಮೊದಲು ಇದ್ದ ಬ್ಯಾಂಕಿಂಗ್ ಪರಿಸ್ಥಿತಿ ಎದುರಾಗಲಿದೆ. ಖಾಸಗಿ ಬ್ಯಾಂಕ್‌ಗಳ ಹಿತಾಸಕ್ತಿ ಕಾಪಾಡುವ ಈ ಖಾಸಗೀಕರಣ, ವಿಲೀನೀಕರಣದ ವಿರುದ್ಧ ಐಕ್ಯ ಹೋರಾಟ ಅಗತ್ಯವಾಗಿದೆ ಎಂದು ಡಿಸೋಜ ಹೇಳಿದರು.

ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಆಚಾರಿ, ಮುಹಮ್ಮದ್ ರಫೀಕ್, ಎಚ್.ವಿ. ರಾವ್, ರವಿಕಿರಣ ಪುಣಚ, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ್, ರಾಘವ, ಬಿ.ಎಂ. ಮಾಧವ, ಬಿ.ಎನ್. ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss