Thursday, August 11, 2022

Latest Posts

ಮಂಗಳೂರು| ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಡಾ. ಭರತ್ ಶೆಟ್ಟಿ ಪ್ರಯತ್ನ ದೇಶಕ್ಕೆ ಮಾದರಿ: ಬಿ.ಎಲ್. ಸಂತೋಷ್

ಮಂಗಳೂರು: ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ರೋಟರಿ ಕ್ಲಬ್ ಬೆಂಗಳೂರು ಪಶ್ಚಿಮ ಸಹಭಾಗಿತ್ವದಲ್ಲಿ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ೧೫ ಸರಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ‘ವಿದ್ಯಾಮಿತ್ರ’ ಡಿಜಿ ಲರ್ನ್ ಸ್ಮಾರ್ಟ್ ಕ್ಲಾಸ್ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಇದರ ಬಿಡುಗಡೆ ಸಮಾರಂಭ ನಗರದ ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿಡಿಯೋ ಕಾನರೆನ್ಸ್ ಮೂಲಕ ನೂತನ ಆಪ್ ಅನಾವರಣಗೊಳಿಸಿ ಮಾತನಾಡಿ, ಖಾಸಗಿ ಶಾಲೆಗಳ ಸ್ಪರ್ಧಾತ್ಮಕ ಚಟುವಟಿಕೆಗಳ ನಡುವೆ ಸರಕಾರಿ ಶಾಲೆ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ಈ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾದುದು. ಎಲ್ಲ ಸರಕಾರಿ ಶಾಲೆಗಳಲ್ಲಿ ಈ ಮಾದರಿಯ ಶಿಕ್ಷಣ ವ್ಯವಸ್ಥೆ ಈಗಿರುವ ವ್ಯವಸ್ಥೆಗೆ ಪೂರಕವಾಗಿ ಬೆಳೆದು ಬರಲಿ ಎಂದು ಆಶಿಸಿದರು.
ಕೊರೊನಾ ಸಂಕಷ್ಟದಲ್ಲಿ ಯಾವಾಗ ಶಾಲೆ ಆರಂಭ ಮಾಡಬೇಕು ಎಂಬ ಪ್ರಶ್ನೆಗಿಂತ ಹೇಗೆ ಶಾಲೆ ಆರಂಭ ಮಾಡಬೇಕು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭ ತಡವಾದರೂ ಸರಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಹೊಸ ಪರಿಕಲ್ಪನೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಈ ಆಪ್ ಹಾಲಿ ಶಿಕ್ಷಣ ವ್ಯವಸ್ಥೆಗೆ ಪೂರಕವೇ ಹೊರತು ಪರ್ಯಾಯ ಅಲ್ಲ. ಸರಕಾರಿ ಶಾಲೆಯ ಎಲ್ಲ ಮಕ್ಕಳಿಗೂ ಈ ವ್ಯವಸ್ಥೆಯ ಲಾಭ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಸುಮಾರು ೪೮ ಸಾವಿರ ಸರಕಾರಿ ಶಾಲೆಗಳಿಗೆ. ಅವುಗಳಲ್ಲಿ ಒಂದು ಕೋಟಿಗೂ ಮಿಕ್ಕಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಪ್ರಯತ್ನ ರಾಜ್ಯದ ಇತರ ಎಲ್ಲ ಕ್ಷೇತ್ರಗಳ ವಿದ್ಯಾರ್ಥಿಗಳಿಗೂ ದೊರೆಯುವಂತಾಗಲಿ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಿಜಿ ಲರ್ನ್ ಸ್ಮಾರ್ಟ್ ಕ್ಲಾಸ್‌ನ ಉಪಕರಣಗಳನ್ನು ಸಾಂಕೇತಿಕವಾಗಿ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಮೇಯರ್ ದಿವಾಕರ್ ಪಾಂಡೇಶ್ವರ್, ಉಪ ಮೇಯರ್ ವೇದಾವತಿ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಡಾ.ವೈ.ಭರತ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ವಂದಿಸಿದರು. ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss