ಮಂಗಳೂರು: ನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ 73 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆದ ಗಣೇಶೋತ್ಸವ ಬುಧವಾರ ಸಮಾಪನಗೊಂಡಿತು.
ಕೊರೋನಾ ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು. ಈ ಬಾರಿ ಗಣೇಶ ವಿಗ್ರದ ವಿಸರ್ಜನೆ ಅಂಗವಾದ ಶೋಭಾಯಾತ್ರೆ ನಡೆಯಲಿಲ್ಲ. ಬೆಳಿಗ್ಗೆ ಪೂಜೆ, ಮಧ್ಯಾಹ್ನ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ನಡೆಯಿತು.
ಬಳಿಕ ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ಸಂಘನಿಕೇತನದಿಂದ ಹೊರತಂದರು. ತೆರೆದ ವಾಹನದಲ್ಲಿ ಮಹಾಮಾಯ ಕೆರೆಗೆ ವಿಗ್ರಹ ತರಲಾಯಿತು. ವಂದೇ ಮಾತರಂ ಹಾಡಿನ ಬಳಿಕ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲಸ್ತಂಭನಗೊಳಿಸಲಾಯಿತು .
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ಆರ್ಎಸ್ಎಸ್ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಪ್ರಮುಖರಾದ ವಿನೋದ್ ಶೆಣೈ, ಪ್ರವೀಣ್ ಕುಮಾರ್, ಸತೀಶ ಪ್ರಭು, ಕೆ. ಪದ್ಮನಾಭ, ರಘುವೀರ್ ಕಾಮತ್, ಗಣೇಶ್, ಜೆ.ಕೆ.ರಾವ್ ಮತ್ತಿತರರು ಉಪಸ್ಥಿತರಿದ್ದರು.