ಹೊಸ ದಿಗಂತ ವರದಿ, ಮಂಗಳೂರು:
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದ ಹಂಪನಕಟ್ಟೆ ರಸ್ತೆ ಕಾಂಕ್ರೀಟಿಕರಣ ಮತ್ತು ಒಳಚರಂಡಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಹಂಪನಕಟ್ಟೆ ಸುತ್ತಮುತ್ತ ನ.8ರಿಂದ 2021ರ ಜನವರಿ 6ರವರೆಗೆ ವಾಹನ ಸಂಚಾರ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಹಂಪನಕಟ್ಟೆ ಕಡೆಯಿಂದ ನವಭಾರತ್ ವೃತ್ತ ಕಡೆಗೆ ಏಕಮುಖ ವಾಹನ ಸಂಚಾರ ಇರಲಿದೆ. ನವಭಾರತ್ ಸರ್ಕಲ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ.
ಹಂಪನಕಟ್ಟೆ ಕಡೆಯಿಂದ ಬಾವುಟಗುಡ್ಡೆ, ಫಳ್ನೀರ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಕೆ.ಎಸ್. ರಾವ್ ರಸ್ತೆಯ ಮೂಲಕ ಪಿವಿಎಸ್ ಕಡೆಗೆ ಹಾಗೂ ಅಂಬೇಡ್ಕರ್ ವೃತ್ತ ಮೂಲಕ ಮುಂದುವರೆಯಬೇಕು.
ಅಂಬೇಡ್ಕರ್ ವೃತ್ತದ ಕಡೆಯಿಂದ ಹಂಪನಕಟ್ಟೆ ಕಡೆಗೆ ಬರುವ ಎಲ್ಲ ವಾಹನಗಳು ಬಲ್ಮಠ ರಸ್ತೆಯಲ್ಲಿರುವ ಅರವಿಂದ ಮೋಟಾರ್ಸ್ ಶೋರೂಂ ಎದುರಿನ ಮಿಲಾಗ್ರಿಸ್ ಕ್ರಾಸ್ ರಸ್ತೆ ಮೂಲಕ ಫಳ್ನೀರು ರಸ್ತೆ ಪ್ರವೇಶಿಸಿ ವೆನ್ಲಾಕ್ ಆಸ್ಪತ್ರೆಯ ಅಂಡರ್ಪಾಸ್ ರಸ್ತೆಯ ಮೂಲಕ ರೈಲ್ವೆ ಸ್ಟೇಶನ್ ರಸ್ತೆ ಮೂಲಕ ತಾಲೂಕು ಪಂಚಾಯತ್ ಕಚೇರಿ ಪಕ್ಕದ ಯು.ಪಿ. ಮಲ್ಯ ರಸ್ತೆಯ ಮೂಲಕ ಎ.ಬಿ. ಶೆಟ್ಟಿ ಸರ್ಕಲ್ ಕಡೆಗೆ ತೆರಳಬೇಕು.
ಮಿಲಾಗ್ರಿಸ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ. ರೈಲ್ವೆ ಸ್ಟೇಷನ್ನಿಂದ ವೆನ್ಲಾಕ್ ಆಸ್ಪತ್ರೆಯ ಅಂಡರ್ ಪಾಸ್ ರಸ್ತೆ ಮೂಲಕ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಡಾ. ಅಂಬೇಡ್ಕರ್ ವೃತ್ತದ ಕಡೆಯಿಂದ ಬಾವುಟಗುಡ್ಡೆ ಕಡೆಗೆ ವಾಹನಗಳ ದ್ವಿಮುಖ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಈ ನಿರ್ಬಂಧ ಪೊಲೀಸ್ ವಾಹನ ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.