Tuesday, August 9, 2022

Latest Posts

ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಜೂ.1ರಿಂದ ಖಾಸಗಿ ಬಸ್ ಓಡಾಟ ಆರಂಭ: ದಿಲ್‌ರಾಜ್ ಆಳ್ವ

ಮಂಗಳೂರು: ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಜೂ.೧ರಿಂದ ಖಾಸಗಿ ಬಸ್ ಓಡಾಟ ಆರಂಭಗೊಳ್ಳಲಿದೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭಕ್ಕೆ ಜಿಲ್ಲಾಡಳಿತ ಇದುವರೆಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸರಕಾರ ನಿರ್ದಿಷ್ಟ ಮಾರ್ಗಸೂಚಿ ನೀಡಿದರೆ ಅದರಂತೆ ಬಸ್ ಓಡಾಟ ನಡೆಸಬೇಕಾಗುತ್ತದೆ. ಜೂ. ೧ರಂದು ಎಲ್ಲ ರೂಟ್‌ಗಳಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ, ಏಕಕಾಲದಲ್ಲಿ ಎಲ್ಲ ಬಸ್‌ಗಳನ್ನು ರಸ್ತೆಗೆ ಇಳಿಸುವುದಿಲ್ಲ. ಒಂದು ರೂಟ್‌ನಲ್ಲಿ ೫ ಬಸ್‌ಗೆ ಪರವಾನಗಿ ಇದ್ದರೆ, ಮೂರು ಬಸ್‌ಗಳನ್ನು ಓಡಿಸಲಾಗುವುದು. ಬಳಿಕ ಜನ ಸಂಚಾರ, ಜನರ ಪ್ರತಿಕ್ರಿಯೆ ಗಮನಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೊಸದಿಗಂತಕ್ಕೆ ಅವರು ತಿಳಿಸಿದ್ದಾರೆ.
ಖಾಸಗಿ ಬಸ್ ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆ ಎಷ್ಟಿರಬೇಕು, ಬಸ್ ದರ ಏರಿಕೆ, ಸ್ಯಾನಿಟೈಸರ್ ಬಳಕೆ, ನಿಲುಗಡೆ ಕುರಿತಾಗಿ ಬಸ್ ಮಾಲಕರು ಜಿಲ್ಲಾಡಳಿತದ ನಿರ್ದೇಶನಕ್ಕೆ ಕಾಯುತ್ತಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಮಾರ್ಗಸೂಚಿ ಬಿಡುಗಡೆಗೊಳಿಸಿದರೆ ಬಸ್ ಸಂಚಾರ ವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಸರಕಾರ ಅನುಮತಿ ನೀಡಿದೆ. ಆದರೆ, ದ.ಕ. ದಲ್ಲಿ ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಮೇ ೨೬ರವರೆಗೆ ಖಾಸಗಿ ಬಸ್‌ಗಳಿಗೆ ತೆರಿಗೆ ವಿನಾಯಿತಿ ದೊರೆತಿದೆ. ಮೇ ೨೭ರಿಂದ ನಾವು ಬಸ್ ಆರಂಭಿಸಬಹುದಿತ್ತು. ಆದರೆ, ಮೇ ೨೭ರಿಂದ ೩೧ರವರೆಗೆ ಬಸ್ ಓಡಿಸಲು ಇಡೀ ತಿಂಗಳ ತೆರಿಗೆ ಪಾವತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜೂ. ೧ರಿಂದ ಬಸ್ ಸಂಚಾರ ಆರಂಭಗೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜೂನ್ ೧ ರಿಂದ ಯಾವ ಮಾರ್ಗಸೂಚಿಯಲ್ಲಿ ಬಸ್ ಓಡಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ಮಾರ್ಗಸೂಚಿ ನೀಡಬೇಕು. ದ.ಕ. ಜಿಲ್ಲಾಡಳಿತದಿಂದ ಈ ಬಗ್ಗೆ ಯಾವುದೇ ರೀತಿಯ ಮಾರ್ಗಸೂಚಿ ಬಂದಿಲ್ಲ. ಈ ಬಗ್ಗೆ ಮಾಹಿತಿ ನೀಡಿದರೆ ಅದಕ್ಕೆ ಬೇಕಾದ ತಯಾರಿ ನಡೆಸುತ್ತೇವೆ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರಕಾರಿ ಬಸ್‌ಗಳು ಈಗಾಗಲೇ ಓಡಾಟ ಆರಂಭಿಸಿವೆ. ಮಂಗಳೂರು ನಗರದಲ್ಲಿ ಸರಕಾರಿ ನರ್ಮ್ ಬಸ್ ಸಂಚಾರ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಾರದ ಹಿಂದೆ ಸೂಚನೆ ನೀಡಿದ್ದಾರೆ. ನಗರದಲ್ಲಿ ೪೦ ನರ್ಮ್ ಬಸ್‌ಗಳು ಸಂಚಾರ ನಡೆಸುತ್ತಿತ್ತು. ಆದರೆ, ಸಚಿವರ ಸೂಚನೆ ಇದ್ದರೂ, ಇದುವರೆಗೆ ನರ್ಮ್ ಬಸ್‌ಗಳು ರಸ್ತೆಗಿಳಿದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss