ಮಂಗಳೂರು: ಜನತೆ ಮನೆಯಿಂದ ಹೊರಬರುವ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿರುವ ಬಗ್ಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಸೂಚನೆಯಂತೆ ದ.ಕ. ಜಿಲ್ಲಾಡಳಿತ ವತಿಯಿಂದ ನಗರದಲ್ಲಿ ಗುರುವಾರ ನಡೆದ ‘ಮಾಸ್ಕ್ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸರಕಾರದ ಕಾರ್ಯಗಳ ಜತೆಗೆ ನಾಗರಿಕರ ಪಾತ್ರವೂ ಅಮೂಲ್ಯ. ಕೊರೋನಾ ಹರಡುವುದನ್ನು ತಡೆಗಟ್ಟಲು ಎಲ್ಲರೂ ಮಾಸ್ಕ್ ಧರಿಸುವುದು ಅಗತ್ಯ. ಸಾರ್ವಜನಿಕ ಸ್ಥಳಕ್ಕೆ ತೆರಳುವಾಗ ಯಾರಲ್ಲಿ ಸೋಂಕು ಇರುತ್ತದೆ ಎಂಬುದು ತಿಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವ ಮೂಲಕ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲ ನಾಗರಿಕರು ಕೈಜೋಡಿಸಬೇಕು ಎಂದರು.
ನಗರದ ಸ್ಟೇಟ್ಬ್ಯಾಂಕ್ ಬಳಿಯ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ಮಾಸ್ಕ್ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸ್ಟೇಟ್ಬ್ಯಾಂಕ್ ಪ್ರದೇಶದಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಲಾಯಿತು.
ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೇಯರ್ ದಿವಾಕರ ಪಾಂಡೇಶ್ವರ ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.