ಹೊಸ ದಿಗಂತ ವರದಿ, ಮಂಗಳೂರು:
ನಗರದ ಸ್ಟೇಟ್ಬ್ಯಾಂಕ್ ಬಳಿಯ ಗೂಡ್ಸ್ಶೆಡ್ ಸಮೀಪ ಸ್ಥಗಿತಗೊಂಡಿರುವ ಮಂಜುಗಡ್ಡೆ ಸ್ಥಾವರದ ಪೈಪ್ಲೈನ್ನಿಂದ ಗುರುವಾರ ಸಂಜೆ 5ರ ವೇಳೆಗೆ ಅಮೋನಿಯಂ ಅನಿಲ ಸೋರಿಕೆ ಉಂಟಾಗಿದ್ದು, ಸ್ಥಳೀಯರು ಉಸಿರಾಟದ ಸಮಸ್ಯೆ ಅನುಭವಿಸಿದ ಘಟನೆ ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿದ್ದು, ಅನಿಲ ಸೋರಿಕೆ ತಡೆಗಟ್ಟಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸದೇ ಇರುವ ಮಂಜುಗಡ್ಡೆ ಸ್ಥಾವರದ ಬಳಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಪೈಪ್ಲೈನ್ ಒಡೆದು ಅದರೊಳಗೆ ಇದ್ದ ಅಮೋನಿಯಂ ಸೋರಿಕೆಯಾಗಿದೆ. ಇದರಿಂದಾಗಿ ಸುತ್ತಲಿನ ಪ್ರದೇಶದ ಜನರಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ಅಗ್ನಿಶಾಮಕದ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಗೂಡ್ಸ್ಶೆಡ್ ಸುತ್ತಲಿನ ಬಾವಿಗಳಿಗೂ ಅಮೋನಿಯಂ ಪಸರಿಸಿರುವ ಸಾಧ್ಯತೆಯಿದ್ದು, ಎಲ್ಲ ಬಾವಿಗಳ ನೀರು ಖಾಲಿ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.