ಕಾಸರಗೋಡು: ಸ್ವಿಪ್ಟ್ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ಎರಡೂವರೆ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಪ್ಪು ಹಣವನ್ನು ಕುಂಬಳೆ ಅಬಕಾರಿ ವಿಭಾಗವು ಸೋಮವಾರ ರಾತ್ರಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಮಂಜೇಶ್ವರ ಸಮೀಪದ ತೂಮಿನಾಡು ಎಂಬಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರೋಪಿ ಕುಂಜತ್ತೂರು ನಿವಾಸಿ ಶಂಸುದ್ದೀನ್ (32) ಎಂಬಾತನನ್ನು ಈ ಸಂಬಂಧ ಬಂಧಿಸಲಾಗಿದೆ.
ಅಲ್ಲದೆ ಕಾಳಧನ ಸಾಗಿಸಲಾದ ಕೆಎಲ್ 14, ವಿ 9148 ದಾಖಲಾತಿ ಸಂಖ್ಯೆಯ ಸ್ವಿಪ್ಟ್ ಕಾರನ್ನು ಎಕ್ಸೈಸ್ ವಿಭಾಗ ವಶಪಡಿಸಿಕೊಂಡಿದೆ. ಮಂಗಳೂರು ಕಡೆಯಿಂದ ಕಾಸರಗೋಡಿನತ್ತ ಬರುತ್ತಿದ್ದ ಕಾರನ್ನು ಸಂಶಯದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅಕ್ರಮ ಹಣ ಪತ್ತೆಯಾಯಿತು. 2 ಕೋಟಿಯ 87 ಸಾವಿರದ 300 ರೂಪಾಯಿ ಕಾಳಧನ ವಶಪಡಿಸಲಾಯಿತು. ಜೊತೆಗೆ ದಾಖಲೆಗಳಿಲ್ಲದ ಚಿನ್ನವೂ ಕಾರಿನಲ್ಲಿ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂಬಳೆ ಅಬಕಾರಿ ವಲಯ ಅಧಿಕಾರಿ ಎಲ್.ನೌಫಲ್, ಪ್ರಿವೆಂಟಿವ್ ಅಧಿಕಾರಿ ರಾಜೀವನ್ ವಿ., ಸಿವಿಲ್ ಅಧಿಕಾರಿ ಸತೀಶನ್, ಶ್ರೀಜೀಷ್, ಗಣೇಶನ್, ಅಬಕಾರಿ ಪೊಲೀಸ್ ವಾಹನ ಚಾಲಕ ಸತ್ಯನ್ ಮುಂತಾದವರು ಪರಿಶೀಲನಾ ತಂಡದಲ್ಲಿದ್ದರು.