ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯ ಹೆಸರಲ್ಲಿ ಕೋಟಿಗಟ್ಟಲೆ ರೂಪಾಯಿ ಠೇವಣಿ ಸಂಗ್ರಹಿಸಿ ಬಳಿಕ ಪಂಗನಾಮ ಹಾಕಿದ ಆರೋಪದಂತೆ ಮುಸ್ಲಿಂಲೀಗ್ ನೇತಾರನಾದ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ವಿರುದ್ಧ ಚಂದೇರ ಪೊಲೀಸರು ಇನ್ನೊಂದು ಕೇಸು ದಾಖಲಿಸಿದ್ದಾರೆ.
ಚೆರ್ವತ್ತೂರು ನಿವಾಸಿ ರಹಮತ್ ಬೀವಿ ಅವರು ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2016ರಲ್ಲಿ 11 ಲಕ್ಷ ರೂಪಾಯಿ ಪಡೆದು ನಂತರ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಇದರೊಂದಿಗೆ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಮುಸ್ಲಿಂಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಪಿ.ಕೆ.ಪೂಕೋಯ ತಂಘಳ್ ವಿರುದ್ಧ ದಾಖಲಾದ ಕೇಸುಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಈ ಪ್ರಕರಣದ ಬಗ್ಗೆ ಕೇರಳ ರಾಜ್ಯದ ಕ್ರೈಮ್ ಬ್ರಾಂಚ್ ಡಿವೈಎಸ್ ಪಿ ಪಿ.ಕೆ.ಸುಧಾಕರನ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯುತ್ತಿದೆ.