ಹೊಸ ದಿಗಂತ ವರದಿ , ಕಾಸರಗೋಡು:
ರಾಜ್ಯದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಮುಸ್ಲಿಂಲೀಗ್ ಭಾರೀ ಷಡ್ಯಂತ್ರ ನಡೆಸಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಮಣಿಕಂಠ ರೈ ಪಟ್ಲ ಆರೋಪಿಸಿದ್ದಾರೆ.
ಕಾಂಗ್ರೆಸ್ನ ಭದ್ರಕೋಟೆಗಳಾಗಿದ್ದ ಮಂಜೇಶ್ವರ, ವರ್ಕಾಡಿ, ಪೈವಳಿಕೆ, ಮೀಂಜ, ಕುಂಬಳೆ ಪಂಚಾಯತ್ಗಳಲ್ಲಿ ಕಾಂಗ್ರೆಸ್ನ್ನು ನಿರ್ನಾಮಗೊಳಿಸಲು ಮುಸ್ಲಿಂಲೀಗ್ ಯತ್ನಿಸಿದೆ ಎಂದವರು ತಿಳಿಸಿದರು.
ಮಂಜೇಶ್ವರ ಶಾಸಕರು ಚಿನ್ನ ಠೇವಣಿ ಪ್ರಕರಣದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರ ಮಂಡಲವನ್ನು ಕಾಂಗ್ರೆಸ್ ಆಗ್ರಹಿಸಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ನ್ನು ಲೀಗ್ ಹೀನಾಯವಾಗಿ ಸೋಲಿಸಿದೆ ಎಂದು ಬಿಜೆಪಿ ದೂರಿದೆ. ಇದೇ ರೀತಿ ಮುಂದುವರಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲದಾಗಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಮುಖಂಡರು ಆತ್ಮ ಚಿಂತನೆ ನಡೆಸಿ ಮುಸ್ಲಿಂಲೀಗ್ನ ಕಪಿ ಮುಷ್ಠಿಯಿಂದ ಹೊರಬಂದು ಬಿಜೆಪಿಗೆ ಸೇರುವುದು ಉತ್ತಮ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆಯು ಸಲಹೆ ನೀಡಿದೆ.
ಈ ಬಗ್ಗೆ ಕುಂಬಳೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ಯಾದವ್, ಆದರ್ಶ್ ಬಿ.ಎಂ., ಮಂಡಲ ಕಾರ್ಯದರ್ಶಿ ರಮೇಶ್ ಭಟ್ ಕುಂಬಳೆ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.