ಕುಂಬಳೆ: ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ರ ಜ್ಯುವೆಲ್ಲರಿ ವಂಚನಾ ಪ್ರಕರಣವು ಕೇವಲ ಮುಸ್ಲಿಂಲೀಗ್ ನ ಆಂತರಿಕ ವಿಚಾರಕ್ಕೆ ಸಂಬಂಧಿಸಿದ್ದು ಅಲ್ಲ. ಹಲವಾರು ಜನರು ಶಾಸಕರ ವಿರುದ್ದ ದೂರು ಕೊಟ್ಟರೂ ಅವರನ್ನು ಬಂಧಿಸದೆ ಕೇರಳ ಸರಕಾರ ಕೂಡ ವಂಚನೆಗೆ ರಕ್ಷಣೆ ನೀಡುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಹೇಳಿದ್ದಾರೆ.
ಜನರಿಗೆ ಮಾದರಿ ಆಗಿರಬೇಕಾದ ಓರ್ವ ಶಾಸಕ ವಂಚಕನಾಗಿರುವುದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ದುರಂತ. ಇಂತಹ ವ್ಯಕ್ತಿಯನ್ನು ಇನ್ನೂ ಕೂಡ ಪಕ್ಷದಲ್ಲಿ ಇರಿಸಿಕೊಂಡು ಮುಸ್ಲಿಂಲೀಗ್ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂಲೀಗ್ ಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇದ್ದಲ್ಲಿ ಎಂಸಿ.ಖಮರುದ್ದೀನ್ ರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ತನಿಖೆಗೆ ಸಹಕಾರ ನೀಡುವಂತೆ ಮಾಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಆಗ್ರಹಿಸಿದರು.
ಶಾಸಕರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳನ್ನು ಜನರು ಬಹಿಷ್ಕರಿಸಬೇಕು. 150 ಕೋಟಿ ರೂಪಾಯಿ ಹಣ ವಂಚಿಸಿರುವುದನ್ನು ಸಾಕ್ಷಿ ಸಮೇತ ಪತ್ತೆಹಚ್ಚಿದರೂ ಕೇರಳ ಪೊಲೀಸ್ ಇಲಾಖೆಯು ಯಾಕಾಗಿ ಖಮರುದ್ದೀನ್ ರನ್ನು ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಎಡರಂಗ ಹಾಗೂ ಮುಸ್ಲಿಂಲೀಗ್ ನ ಆಂತರಿಕ ಒಪ್ಪಂದವಾಗಿದೆ ಎಂದು ಕಟುಟೀಕೆ ಮಾಡಿದರು.
ಶಾಸಕರು ವಂಚನೆ ನಡೆಸಿ ಈಗ ಹಣ ನೀಡಿ ಕೇಸು ಇಲ್ಲವಾಗಿಸಿದರೆ ವಂಚನೆ ಇಲ್ಲವಾಗುವುದೇ. ಆದ್ದರಿಂದ ನೈತಿಕ ಹೊಣೆ ಹೊತ್ತು ಶಾಸಕರು ರಾಜೀನಾಮೆ ನೀಡಲಿ ಎಂದು ತಿಳಿಸಿದರು. ಕೇರಳ ಮುಖ್ಯಮಂತ್ರಿಯಿಂದ ತೊಡಗಿ ಮುಸ್ಲಿಂಲೀಗ್ ಶಾಸಕರ ವರೆಗೆ ಅಕ್ರಮ ಸಂಪಾದನೆ ತನಿಖೆಯಾಗಲಿ ಎಂದು ಬಿಜೆಪಿ ಮಂಡಲ ಅಧ್ಯಕ್ಷರು ಆಗ್ರಹಿಸಿದರು.