Wednesday, August 10, 2022

Latest Posts

ಮಂಡಲಪೂಜೆ, ಮಕರಜ್ಯೋತಿ ಉತ್ಸವ: ಶಬರಿಮಲೆಗೆ ಸೀಮಿತ ಭಕ್ತರ ಪ್ರವೇಶಕ್ಕೆ ಅವಕಾಶ

ತಿರುವನಂತಪುರ: ಮುಂಬರುವ ಶಬರಿಮಲೆ ಯಾತ್ರೆಯ ಹಿನ್ನೆಲೆಯಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಒದಗಿಸಲು ಕೇರಳ ಸರಕಾರವು ನಿರ್ಧರಿಸಿದೆ.
ಕೋವಿಡ್ ವೈರಸ್ ಸೋಂಕು ಆತಂಕದ ನಡುವೆಯೂ ಈ ಬಾರಿ ನವೆಂಬರ್ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದ್ದು , ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳೊಂದಿಗೆ ಶಬರಿಮಲೆ ಯಾತ್ರೆ ನಡೆಸಲಾಗುವುದು ಮತ್ತು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸೀಮಿತ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಈ ಬಾರಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುವ ಯಾತ್ರಾರ್ಥಿಗಳು ದರ್ಶನ ಪಡೆದ ದಿನವೇ ವಾಪಸ್ ಆಗಬೇಕು. ನಿಗದಿಪಡಿಸಲಾದ ಭಕ್ತರಿಗೆ ಮಾತ್ರ ಪೇಪರ್ ತಟ್ಟೆಗಳಲ್ಲಿ ಅನ್ನದಾನದ ವ್ಯವಸ್ಥೆ ಇರಲಿದೆ. ಭಕ್ತರು ಬೆಟ್ಟ ಏರುವಾಗ ಮಾಸ್ಕ್ ಕಡ್ಡಾಯವಾಗಿದ್ದು , ಪಂಪಾ ನದಿಯ ನೀರಿನಲ್ಲಿ ಈಜಾಡಿ ಸ್ನಾನ ಮಾಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಇತರ ರಾಜ್ಯಗಳಿಂದ ದಿನಂಪ್ರತಿ ಎಷ್ಟು ಮಂದಿ ಭಕ್ತರಿಗೆ ಶಬರಿಮಲೆ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು ಎಂಬ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಸಮಿತಿಯು ಪರಿಶೀಲಿಸಲಿದೆ. ಪೂರ್ಣರೂಪದಲ್ಲಿ ವರ್ಚುವಲ್ ಸರದಿ ಪ್ರಕಾರ ಮಾತ್ರವೇ ಭಕ್ತರಿಗೆ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ. ಶಬರಿಮಲೆ ದೇವಾಲಯಕ್ಕೆ ಕೊರೋನಾ ಬಾಧಿತರು ಆಗಮಿಸದಂತೆ ತಡೆಯುವ ನಿಟ್ಟಿನಲ್ಲಿ ಆಂಟಿಜೆನ್ ತಪಾಸಣೆ ನಡೆಸಲಾಗುವುದು. ಪಂಪಾದಲ್ಲೂ , ಸನ್ನಿಧಾನದಲ್ಲೂ ತಂಗಲು ಅನುಮತಿ ನೀಡಲಾಗದು. ನಿಲಯ್ಕಲ್ ನಲ್ಲಿ ಸೀಮಿತವಾಗಿ ತಂಗಲು ಅವಕಾಶ, ಪಂಪಾದಲ್ಲಿ 100ರೂ. ಪಾವತಿಸಿ ಸ್ಟೀಲ್ ಪಾತ್ರೆಯಲ್ಲಿ ನೀರು ಖರೀದಿ ವ್ಯವಸ್ಥೆ , ಹಿಂತಿರುಗುವಾಗ ಪಾತ್ರೆಯನ್ನು ಮರಳಿಸಿ ಹಣ ಹಿಂಪಡೆಯಲು ಅವಕಾಶ, ನಿಶ್ಚಿತ ಸಮಯದಲ್ಲಿ ಪೇಪರ್ ಪ್ಲೇಟ್ ನಲ್ಲಿ ಅನ್ನ ಪ್ರಸಾದ ವಿತರಣೆ, ಕನ್ಸ್ಯೂಮರ್ ಫೆಡ್, ಸಪ್ಲೈಕೋದ ಅಂಗಡಿಗಳು, ಹೆಚ್ಚುವರಿ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ , ಮಾಸ್ಕ್ ಧಾರಣೆ ಕಡ್ದಾಯ, ಅಭಿಷೇಕಕ್ಕಿರುವ ತುಪ್ಪ ನಿಗದಿತ ಸ್ಥಳದಲ್ಲಿ ಸಂಗ್ರಹಿಸಿದ ಬಳಿಕ ತುಪ್ಪ ಒದಗಿಸುವ ಕುರಿತು ಪರಿಶೀಲನೆ, ಕೋವಿಡ್ ಪ್ರೊಟೋಕಾಲ್ ನಂತೆ ಚಿನ್ನಾಭರಣ ಶೋಭಾಯಾತ್ರೆ ಅಲ್ಲದೆ ಪಂಪಾ, ಎರುಮೇಲಿ ಸ್ನಾನ ಕೇಂದ್ರಗಳಲ್ಲಿ ಕೇವಲ ಸ್ಪ್ರಿಂಕ್ಲರ್ , ಶವರ್ ವ್ಯವಸ್ಥೆ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss