ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದರ ಜೊತೆಗೆ ಕೆ.ಆರ್. ಪೇಟೆಯಲ್ಲಿ ಪೇದೆಗೆ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ತಪಾಸಣೆ ನಡೆಸಲು ಇಲಾಖೆ ಮುಂದಾಗಿದೆ.
ಜಿಲ್ಲೆಯಲ್ಲಿ ಸುಮಾರು 1229 ಮಂದಿ ಪೊಲೀಸ್ ಸಿಬ್ಬಂದಿಗಳಿದ್ದು, ಈ ಪೈಕಿ 969 ಮಂದಿ ನಾಗರೀಕ ಸೇವಾ ಸಿಬ್ಬಂದಿಗಳು ಹಾಗೂ 260 ಮಂದಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ಇದ್ದಾರೆ. ಈಗಾಗಲೇ 490ಕ್ಕೂ ಹೆಚ್ಚು ಮಂದಿ ಪೊಲೀಸರು ತಮ್ಮ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು, ಯಾರಿಗೂ ಸೋಂಕು ತಗುಲಿಲ್ಲ ಎನ್ನುವುದು ಸಮಾಧಾನ ತಂದಿದೆ.
ಉಳಿದಂತೆ ಹಂತ ಹಂತವಾಗಿ ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್-19 ಪರೀಕ್ಷೆ ಮಾಡಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷ ಕೆ. ಪರಶುರಾಮ ತಿಳಿಸಿದರು.
ಪರೀಕ್ಷೆಗೆ ಒಳಗಾದ ಎಸ್ಪಿ: ಕೆ.ಆರ್.ಪೇಟೆ ಪೇದೆಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ ಅವರೇ ಖುದ್ದು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮದ್ದೂರು ಆಸ್ಪತ್ರೆಗೆ ಭೇಟಿ ನೀಡಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡರು. ಇವರ ಜೊತೆ ಹಲವು ಪೊಲೀಸ್ ಅಧಿಕಾರಿಗಳು ಪರೀಕ್ಷೆಗೆ ಒಳಗಾಗಿದ್ದಾರೆ.
ಪೇದೆಗೆ ಕೊರೊನಾ ದೃಢವಾದ ಪರಿಣಾಮ ಆತ ಓಡಾಡಿದ್ದ ಎಲ್ಲಾ ಸ್ಥಳಗಳನ್ನು ಸೀಲ್ಡೌನ್ ಮಾಡಲಾಗಿದೆ.