ಹೊಸದಿಗಂತ ವರದಿ, ಮಂಡ್ಯ
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರುದ್ಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಂಡ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾದ್ಯಂತ ಯಾವುದೇ ಬಂದ್ ನಡೆಯದೆ ಕೇವಲ ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗಿತ್ತು.
ಕನ್ನಡ ಸಂಘಟನೆಗಳು ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಪ್ರತಿಭಟನೆ, ಜಾಥಾ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಎಮ್ಮೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.
ವ್ಯಾಪಾರ ವಹಿವಾಟು: ಎಂದಿನಂತೆ ನಗರದ ಪೇಟೆ ಬೀದಿ, ವಿ.ವಿ. ರಸ್ತೆ, ಗುತ್ತಲು ರಸ್ತೆ ಸೇರಿದಂತೆ ವಿವಿಧೆಡೆ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಿದವು. ಬಂದ್ನ ಬಿಸಿ ಯಾವುದೇ ಅಂಗಡಿಗಳಿಗೂ ಮುಟ್ಟಲಿಲ್ಲ. ಸರ್ಕಾರ ಮತ್ತು ನ್ಯಾಯಾಲಯದ ಎಚ್ಚರಿಕೆಯಿಂದಾಗಿ ಪ್ರತಿಭಟನಾಕಾರರು ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮುಂದಾಗಲಿಲ್ಲ.
ಮಂಡ್ಯ ರಕ್ಷಣಾ ವೇದಿಕೆಯಿಂದ ಎಮ್ಮೆ ಪ್ರತಿಭಟನೆ: ಬೆಳಗ್ಗೆ 6-30ರ ಸಮಯಕ್ಕೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜೆ.ಸಿ. ವೃತ್ತಕ್ಕೆ ಎಮ್ಮೆಯೊಂದಿಗೆ ಆಗಮಿಸಿ, ವೇದಿಕೆ ಅಧ್ಯಕ್ಷ ಶಂಕರ್ಬಾಬು ಅವರ ನೇತೃತ್ವದಲ್ಲಿ ಎಮ್ಮೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಸಂಚಾರಕ್ಕೆ ತಡೆ: ಕರ್ನಾಟಕ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಕದಂಬ ಸೈನ್ಯ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳು ವೃತ್ತದಲ್ಲಿ ಜಮಾಯಿಸಿದರು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ ಪೊಲೀಸರು ಮನವೊಲಿಸಿ ಪ್ರತಿಭಟನಾಕಾರರನ್ನು ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನಾ ಮೆರವಣಿಗೆ-ಜಾಥಾ: ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸೇನೆ, ಜಯಕರ್ನಾಟಕ, ಕದಂಬ ಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಡಿ.ಸಿ.ಸಿ ಬ್ಯಾಂಕ್ ರಸ್ತೆ, ಹೊಳಲು ವೃತ್ತ, ಪೇಟೆ ಬೀದಿ, ಜೈನರ ಬೀದಿ, ವಿ.ವಿ. ರಸ್ತೆ, ಆಸ್ಪತ್ರೆ ರಸ್ತೆ, ಬೆಸಗರಹಳ್ಳಿ ರಾಮಣ್ಣ ವೃತ್ತ, ನೂರಡಿ ರಸ್ತೆ, ಆರ್.ಪಿ. ರಸ್ತೆ, ಕೆ.ಆರ್. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜಾಥಾ ನಡೆಸಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಜಾರಿಗೊಳಿಸಿರುವುದನ್ನು ವಿರೋಧಿಸಿದರು.