ಮಂಡ್ಯ: ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ಹಾಗೂ ಗುಣಮಟ್ಟದ ಆಹಾರ ನೀಡುತ್ತಿರುವುದಕ್ಕೆ ಖುಷಿಗೊಂಡ ಕೊರೋನಾ ಸೋಂಕಿತರು ವಾರ್ಡ್ನಲ್ಲಿ ಕುಣಿದು ಕುಪ್ಪಳಿಸುವ ಜೊತೆಗೆ ವೈದ್ಯರ ಗುಣಗಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ವಾರ್ಡ್ವೊಂದರಲ್ಲಿ ತಾವು ನೃತ್ಯ ಮಾಡುತ್ತಿರುವ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಜೊತೆಗೆ ವೈದ್ಯರು ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಮನಸಾರೆ ಕೊಂಡಾಡಿದ್ದಾರೆ.
ಮಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಉತ್ತಮವಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ. ನಿತ್ಯವೂ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದಾರೆ. ಇಂತಹ ಸೇವೆ ರಾಜ್ಯದ ಬೇರಾವುದೇ ಆಸ್ಪತ್ರೆಯಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಸ್ನೇಹಿತರೂ ಸಹ ಇಲ್ಲಿ ಬಂದು ದಾಖಲಾಗಿ ಒಂದೇ ವಾರದಲ್ಲಿ ಗುಣಮುಖರಾಗಿ ಹೋಗಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿರುವ ವೈದ್ಯರೆಲ್ಲರೂ ಸೋಂಕಿತರ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡುತ್ತಿದ್ದಾರೆ. ಊಟ- ತಿಂಡಿ ಎಲ್ಲವೂ ಚೆನ್ನಾಗಿದೆ. ಇದಕ್ಕಾಗಿ ನಾವು ವೈದ್ಯರು ಹಾಗೂ ಆಡಳಿತ ವರ್ಗದವರಿಗೆ ಅಭಿನಂದನೆ ಹೇಳುತ್ತೇವೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಕೊರೋನಾ ಸೋಂಕಿನಿಂದ ಗುಣಮುಖರಾದ ಜನರು ಕೊರೋನಾ ಗೆದ್ದ ವೀರರು ಎಂಬ ವ್ಯಾಟ್ಸಾಪ್ ಗ್ರೂಪ್ ಮಾಡಿಕೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.