ಹೊಸ ದಿಗಂತ ವರದಿ, ಮಂಡ್ಯ :
ಮಂಡ್ಯ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ನೂತನ ಸಂಚಾಲಕ ಹಾಗೂ ಸಹ ಸಂಚಾಲಕರ ಸಭೆ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ನಡೆಯಿತು.
ಮೈಸೂರು ವಿಭಾಗದ ಪ್ರಕೋಷ್ಠ ಉಸ್ತುವಾರಿ ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರಕೋಷ್ಠಗಳು ಮೋರ್ಚಾ ಮತ್ತು ಪದಾಧಿಕಾರಿಗಳಷ್ಟೇ ಶಕ್ತಿಶಾಲಿಯಾಗಿದ್ದು, ಪ್ರಕೋಷ್ಠಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಚಾಲಕರು ಮತ್ತು ಸಹ ಸಂಚಾಲಕರು ಶ್ರಮಿಸುವಂತೆ ಕರೆ ನೀಡಿದರು.
ಪ್ರಕೋಷ್ಠದ ಜಿಲ್ಲಾ ಸಮಿತಿಯಲ್ಲಿ 9 ಮಂದಿ ಸದಸ್ಯರು, ಮಂಡಲ ಸಮಿತಿಯಲ್ಲಿ 7 ಮಂದಿಯ ಸಮಿತಿ ರಚಿಸಬೇಕು. ಪರಿಶಿಷ್ಟ ಜಾತಿ,
ವರ್ಗ, ಮಹಿಳೆ ಸೇರಿದಂತೆ ಎಲ್ಲ ವರ್ಗದವರಿಗೂ ಪ್ರಾಧಾನ್ಯತೆ ನೀಡಬೇಕು ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿಯವರು ಬೀದಿ ಬದಿಯ ವ್ಯಾಪಾರಿಗಳಿಗೆ 10 ಸಾವಿರ ರೂ.ಗಳನ್ನು ಸಹಾಯಧನ ನೀಡುತ್ತಿರುವುದನ್ನು ವ್ಯಾಪಾರಿ ಪ್ರಕೋಷ್ಠದ ಸಂಚಾಲಕರುಗಳು ಬೀದಿ ಬದಿಯ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನು ಜನರಿಗೆ ತಿಳಿಸುವಂತೆ ಕರೆ ನೀಡಿದರು.
ಕೈಗಾರಿಕಾ ಪ್ರಕೋಷ್ಠದ ಸಂಚಾಲಕರು ಕೇಂದ್ರ ಸರ್ಕಾರದ ಎಂಎಸ್ಎಂಇ, ಆತ್ಮನಿರ್ಭರ ಭಾರತ್ ಇನ್ನು ಮುಂತಾದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರುತರ ಕೆಲಸಗಳನ್ನು ಪ್ರಕೋಷ್ಠಗಳು ನಿರ್ವಹಿಸಬೇಕು ಎಂದು ಹೇಳಿದರು.
20ಕ್ಕೂ ಹೆಚ್ಚು ಪ್ರಕೋಷ್ಟಗಳು ಇದ್ದು, ಫೆ.15ರೊಳಗೆ ಜಿಲ್ಲೆಯಲ್ಲಿ ಪ್ರಕೋಷ್ಠಗಳ ದೊಡ್ಡ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಪದಾಧಿಕಾರಿಗಳಿಗೆ ಸರಿಸಮವಾಗಿ ಪ್ರಕೋಷ್ಠಗಳು ಪ್ರಬಲವಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಸಿಕೊಡಬಹುದು ಎಂದರು.