ಹೊಸದಿಗಂತ ವರದಿ, ಮಂಡ್ಯ
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. 50 ಸಾವಿರ ಲಸಿಕೆಗಳನ್ನು ಸಂಗ್ರಹಿಸಿಡಲು ಯೋಜನೆ ರೂಪಿಸಲಾಗಿದೆ.
ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಲಸಿಕೆ ಇಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಲಿ 124 ಐಎಲ್ಆರ್ (ಐಸ್ಲೈನ್ ರೆಫ್ರಿಜಿರೇಟರ್)ಗಳಿವೆ. ಇದರಲ್ಲಿ ಸುಮಾರು 50 ಸಾವಿರ ಲಸಿಕೆ ಸಂಗ್ರಹಿಸಿಡಲು ಸಾಧ್ಯವಿದೆ. ಖಾಸಗಿ ಆಸ್ಪತ್ರೆಗಳ ಪೈಕಿ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಮಾತ್ರ ಐಎಲ್ಆರ್ ವ್ಯವಸ್ಥೆ ಇದೆ.
ಮುಂಜಾಗ್ರತೆಯಾಗಿ ಹೆಚ್ಚುವರಿ 40 ಐಎಲ್ಆರ್ಗಳನ್ನು ನೀಡುವಂತೆ ಸರ್ಕಾರಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ದೊಡ್ಡ ಗಾತ್ರದ ಐಎಲ್ಆರ್ಗಳನ್ನು ನೀಡಿದಲ್ಲಿ ಅದರಲ್ಲಿ 30 ಸಾವಿರದಷ್ಟು ಲಸಿಕೆ ಸಂಗ್ರಹಿಸಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ ಅವರು ತಿಳಿಸಿದರು.