Wednesday, August 10, 2022

Latest Posts

ಮಂಡ್ಯ| ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು,ಪರದಾಡಿದ ಜನತೆ

ಮಂಡ್ಯ: ಮಂಗಳವಾರ ಮಧ್ಯಾಹ್ನದಿಂದ ರಾತ್ರಿಯಿಡೀ ಹಾಗೂ ಬುಧವಾರ ಸುರಿದ ಮಳೆಯಿಂದಾಗಿ ಕೆರೆಯಂಗಳದ ವಿವೇಕಾನಂದ ನಗರದಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ಜನತೆ ತೀವ್ರ ಪರದಾಡುವಂತಾಗಿತ್ತು.
ಮಂಗಳವಾರ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಆ ನೀರನ್ನು ಹೊರಹಾಕುವಲ್ಲಿ ಜನತೆ ನಿರತರಾಗಿದ್ದರು. ಕಾಲೋನಿಯ ಪ್ರತಿ ರಸ್ತೆಗಳೂ ಹಳ್ಳಕೊಳ್ಳಗಳಿಂದ ಕೂಡಿರುವುದರಿಂದ ನೀರು ನಿಂತು ಕೆಸರಿನ ಗದ್ದೆಯಂತಾಗಿದೆ. ಜನತೆ ಓಡಾಡಲು ತೀವ್ರ ತೊಂದರೆಯಾಗಿದ್ದು, ಕೆಲವರು ಜಾರಿಬಿದ್ದಿದ್ದಾರೆ.
ಕಾಲೋನಿಯ ಕೆಲವು ಅಂಗಡಿಗಳಿಗೂ ನೀರು ನುಗ್ಗಿದ್ದು, ತರಕಾರಿಗಳು, ಸಾಮಗ್ರಿಗಳು ಹಾಳಾಗಿವೆ. ಜೋರು ಮಳೆ ಬಂದರಂತೂ ಇಲ್ಲಿನ ನಿವಾಸಿಗಳ ಮುಖದಲ್ಲಿ ಭಯದ ಛಾಯೆ ಕಂಡು ಬರುತ್ತದೆ. ಇಲ್ಲಿನ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಗಳನ್ನು ಮಾಡುತ್ತೇವೆ ಎಂದು ಅಗೆದು ಅಗೆದು ಕಾಲೋನಿಯ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಮಳೆ ನೀರು ಮನೆಗೆ ನುಗ್ಗಿದರೆ ಅದನ್ನು ಹೊರ ಹಾಕುವುದೇ ಒಂದು ಕೆಲಸವಾಗುತ್ತದೆ. ಇದರಿಂದ ಮನೆಯ ಕೆಲವು ಸಾಮಾನುಗಳು ಹಾಳಾಗಿದ್ದು, ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸಬೇಕು ಎನ್ನವುದು ಇಲ್ಲಿನ ಜನರ ಆಗ್ರಹವಾಗಿದೆ.
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ವರ್ಷದ ಮಳೆಗಾಲದಲ್ಲಿ ಈ ಸಮಸ್ಯೆ ಉಲ್ಬಣಿಸುತ್ತದೆ. ಆದರೆ, ಸಂಬಂಧಿಸಿದ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss