ಮಂಡ್ಯ : ನಂಜನಗೂಡು ಜುಬಿಲಿಯೆಂಟ್ ಕಾರ್ಖಾನೆ ನೌಕರ ತರಕಾರಿ ಮಾರುಕಟ್ಟೆ ರಸ್ತೆಯ ನಿವಾಸಿಗೆ ಕೋವಿಡ್-19 ಸೋಂಕು ತಗುಲಿದ್ದ ಕಾರಣ ನಗರದ ಪೇಟೆಬೀದಿ, ಜೈನರ ಬೀದಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕಂಟೈನ್ಮೆಂಟ್ ಝೋನ್ ಪ್ರದೇಶವೆಂದು ಘೋಷಿಸಿರುವುದು ವರ್ತಕರು, ವ್ಯಾಪಾರಿಗಳಿಗೆ ಸಂಕಟ ತಂದೊಡ್ಡಿದೆ.
ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಿ 26 ದಿನಗಳು ಕಳೆದಿದ್ದರೂ, ಇನ್ನೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದವರ ಮೇಲೆ ಕ್ಯಾಮೆರಾ ಕಣ್ಣಿಡಲು ಮಂಗಳವಾರ ಡ್ರೋಣ್ ಕ್ಯಾಮೆರಾದ ಕಣ್ಗಾವಲು ಇರಿಸಲಾಗಿತ್ತು.
ಪೇಟೆ ಬೀದಿ, ಜೈನರ ಬೀದಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಡ್ರೋಣ್ ಕ್ಯಾಮೆರಾ ಕಣ್ಗಾವಲು ಇಟ್ಟಿರುವ ಪೊಲೀಸರು ನಿವಾಸಿಗಳಿಗೆ ಡ್ರೋಣ್ ಕ್ಯಾಮೆರಾದಲ್ಲೇ ಅಳವಡಿಸಲಾಗಿದ್ದ ಧ್ವನಿಮುದ್ರಿಕೆಯಿಂದ ಮನೆಯಿಂದ ಯಾರೂ ಹೊರಬರಬಾರದು, ಅನಗತ್ಯವಾಗಿ ಓಡಾಡಿದವರ ಮೇಲೆ ಕಾನೂನು ಕ್ರಮ, ದಂಡ ಇತ್ಯಾದಿ ಎಚ್ಚರಿಕೆಗಳನ್ನು ನೀಡುತ್ತಿದ್ದುದು ಕಂಡುಬಂತು.
ಈ ವೇಳೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷ ಕೆ. ಪರಶುರಾಮ ಭೇಟಿ ನೀಡಿ ಡ್ರೋಣ್ ಕ್ಯಾಮೆರಾದ ಕಾರ್ಯವೈಖರಿ ಹಾಗೂ ಕಂಟೈನ್ಮೆಂಟ್ ಝೋನ್ ಭದ್ರತೆ ಕುರಿತು ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ನವೀನ್ಕುಮಾರ್, ಸಿಪಿಐ ವಿವೇಕಾನಂದ, ಪಿಎಸ್ಐ ಪಿ.ಕೆ. ಧೀಕ್ಷಿತ್ ಸೇರಿದಂತೆ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.