ಹೊಸ ದಿಗಂತ ವರದಿ, ಮಂಡ್ಯ:
ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕೋವಿಡ್ ಮಾದರಿ ಲಸಿಕಾ ಕೇಂದ್ರ ವೀಕ್ಷಣೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯಸರ್ಕಾರ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ನೀಡುವುದಕ್ಕೆ ಜಿಲ್ಲಾಡಳಿತ, ಮಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ
ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನಾ ಲಸಿಕೆ ನೀಡುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ವೈದ್ಯ ಮತ್ತು ಅರೆ ವೈದ್ಯ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಲಸಿಕೆ ನೀಡುವುದಕ್ಕೆ ನೋಂದಾಯಿಸಿಕೊಳ್ಳಬೇಕು. ಒಂದು ಕೊಠಡಿಯಲ್ಲಿ ಗುರುತಿನ ಚೀಟಿ ಪರಿಶೀಲನೆ ನಡೆದರೆ, ಮತ್ತೊಂದು ಕೊಠಡಿಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ಇನ್ನೊಂದು ಕೊಠಡಿಯಲ್ಲಿ ಲಸಿಕೆ ಪಡೆದವರರ ಆರೋಗ್ಯದ ಮೇಲೆ 20 ರಿಂದ 30 ನಿಮಿಷಗಳ ಕಾಲ ನಿಗಾ ಇಡಲಾಗುವುದು. ಒಮ್ಮೆ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣವೇ ತುರ್ತು ಚಿಕಿತ್ಸಾ ಔಷಧಗಳನ್ನು ನೀಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಡ್ಡಪರಿಣಾಮಗಳಾಗದಿದ್ದರೆ ಕೂಡಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ವಿವರಿಸಿದರು.