ಮಂಡ್ಯ : ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿರ್ದೇಶಕರ ಕಚೇರಿಯನ್ನು ಸ್ಯಾನಿಟೈಸರ್ ಮಾಡಿ ಸ್ವಚ್ಛಗೊಳಿಸಲಾಗಿದೆ.
ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದ ನಿರ್ದೇಶಕರು ಹೆಚ್ಚು ಹೊರಹೋಗುತ್ತಿರಲಿಲ್ಲ. ಭಾನುವಾರ ಇದ್ದಕ್ಕಿದ್ದಂತೆ ಡಾ.ಜಿ.ಎಂ.ಪ್ರಕಾಶ್ ಅವರಿಗೆ ಮೈ ಕೈ ನೋವು ಶುರುವಾಗಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿತು ಎಂದು ಹೇಳಲಾಗಿದೆ. ಇದರಿಂದ ಅನುಮಾನಗೊಂಡ ಅವರು ಮುನ್ನೆಚ್ಚರಿಕೆಯಾಗಿ ಮಿಮ್ಸ್ ಆಸ್ಪತ್ರೆಯಲ್ಲೇ ಕೊರೋನಾ ಪರೀಕ್ಷೆಗೆ ಒಳಗಾದರು. ಆಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಡಾ.ಜಿ.ಎಂ.ಪ್ರಕಾಶ್ ಅವರಿಗೆ ಸೋಂಕು ಯಾರಿಂದ ಹರಡಿತು ಎನ್ನುವುದು ಮಾತ್ರ ಗೊತ್ತಾಗಿಲ್ಲ. ಕೋವಿಡ್ ಆಸ್ಪತ್ರೆಯ ಸಂಪರ್ಕದಲ್ಲಿರುವವರಿಂದಲೇ ಪ್ರಕಾಶ್ ಅವರಿಗೆ ಸೋಂಕು ಹರಡಿರುಬಹುದೆಂದು ನಂಬಲಾಗಿದೆ. ಮುಂಜಾಗ್ರತೆಯಾಗಿ ಅವರ ಕುಟುಂಬದವರು, ಮಿಮ್ಸ್ ನಿರ್ದೇಶಕರ ಕಚೇರಿ ಸಿಬ್ಬಂದಿಯನ್ನು ಪ್ರಾಥಮಿಕ ಸಂಪರ್ಕದವರು ಎಂದು ಗುರುತಿಸಲಾಗಿದೆ. ನಿರ್ದೇಶಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಹೋಂ ಐಸೋಲೇಷನ್ಗೆ ಒಳಪಡಿಸಲಾಗಿದೆ. ಮಿಮ್ಸ್ ನಿರ್ದೇಶಕರ ಕಚೇರಿಯನ್ನಷ್ಟೇ 48 ಗಂಟೆಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ ಕಚೇರಿಯನ್ನುಶುಚಿಗೊಳಿಸಲಾಗಿದೆ.
ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್ಗೆ ಸೋಂಕು ಹರಡಿರುವ ಕಾರಣ ಮಿಮ್ಸ್ ನಿರ್ದೇಶಕರ ಕಚೇರಿ ಸಿಬ್ಬಂದಿ ಹಾಗೂ ಡಾ.ಜಿ.ಎಂ.ಪ್ರಕಾಶ್ ಕುಟುಂಬದವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.