Wednesday, July 6, 2022

Latest Posts

ಮಂಡ್ಯ| ಸಿದ್ದರಾಮಯ್ಯ-ಡಿಕೆಶಿಯಿಂದ ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಜಿಲ್ಲಾಧ್ಯಕ್ಷರ ಆರೋಪ

ಮಂಡ್ಯ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕಿಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ದೂರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ತಮ್ಮ ಪಕ್ಷದ ಕಾರ್ಯಕರ್ತರನ್ನೇ ಸಾವಿರಾರು ಸಂಖ್ಯೆಯಲ್ಲಿ ಸೇರಿಸಿಕೊಂಡು ರೈತ ಸಮ್ಮೇಳನ ನಡೆಸುವ ಮೂಲಕ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ಆರೋಪಿಸಿದರು.
ರೈತರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆಗಳನ್ನು ವಿರೋಧಿಸುವ ಭರದಲ್ಲಿ 100 ಮಂದಿಗೆ ಮಾತ್ರ ಅವಕಾಶ ಪಡೆದು, ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ಸಮ್ಮೇಳನ ನಡೆಸಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರದ ಮೇಲೆ ನಿಯಮ ಉಲ್ಲಂಘನೆ ಆರೋಪವನ್ನು ಮಾಡುವುದು ಎಷ್ಟು ಸರಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಸಮಾರಂಭದ ಆರಂಭದಲ್ಲಿ ಕೆಲ ನಾಯಕರು ಕಾರ್ಯಕರ್ತರನ್ನು ತಡೆಯಲು ಯತ್ನಿಸಿದರಾದರೂ, ಸಾಧ್ಯವಾಗಲಿಲ್ಲ. ಮಾಸ್ಕ್ ಧರಿಸಿಕೊಂಡು ಸಭಾಂಗಣ ಪ್ರವೇಶಿಸಿದ ಕಾರ್ಯಕರ್ತರು, ಸಭೆ ಆರಂಭವಾಗುತ್ತಿದ್ದಂತೆ ತಮ್ಮ ಮುಖದ ಮೇಲೆ ಹಾಕಿಕೊಂಡಿದ್ದ ಮಾಸ್ಕ್‍ಗಳನ್ನು ಕಿತ್ತೆಸೆದು ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರಿಗೆ ಕನಿಷ್ಠ ಸೂಚನೆಯನ್ನೂ ನೀಡದೆ, ಕೇವಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಮ್ಮೇಳನದಲ್ಲಿ ರೈತರಿಗೇ ಆಸನಗಳನ್ನು ಬಿಟ್ಟುಕೊಡದ ಕಾರ್ಯಕರ್ತರನ್ನು ಹೊರಗೆ ಕಳುಹಿಸಲಾಗದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇತರರು, ಒಂದಿಬ್ಬರು ರೈತ ಮುಖಂಡರನ್ನು ಮಾತ್ರ ಸಭಾಂಗಣದೊಳಗೆ ಬಿಟ್ಟು ಉಳಿದವರನ್ನು ಸಭಾಂಗಣದ ಹೊರಗೆ ಹಾಕಲಾಗಿದ್ದ ಶಾಮಿಯಾನ ಕೆಳಗೆ ಕೂರಿಸಿ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಉತ್ತಮವಾಗಿ ಆಡಳಿತ ನಡೆಸುತ್ತಿವೆ. ರೈತ ಹಾಗೂ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸರ್ವ ಜನಾಂಗಕ್ಕೂ ಕಾರ್ಯಕ್ರಮ ರೂಪಿಸುತ್ತಿರುವ ಸರ್ಕಾರದ ಜನಪ್ರಿಯತೆಯನ್ನು ಸಹಿಸದೆ ಸುಳ್ಳು ಆರೋಪಗಳನ್ನು ಮಾಡುತ್ತಾ ರೈತರು ಮತ್ತು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನಾದರೂ ಇಂತಹ ಸಣ್ಣತನದ ರಾಜಕಾರಣ ಮಾಡುವುದನ್ನು ಬಿಟ್ಟು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಗೂಡಿಸಬೇಕು. ಸರ್ಕಾರಕ್ಕೆ ಸಲಹೆ ನೀಡುವ ಮೂಲಕ ಜನಸಾಮಾನ್ಯರ ಒಳಿತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss