ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಗುಲಬರ್ಗಾ ವಿಶ್ವವಿದ್ಯಾಲಯದಿಂದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.
ಸುಬುಧೇಂದ್ರ ತೀರ್ಥರ ಸಾಮಾಜಿಕ ಸೇವೆ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆ ಪರಿಗಣಿಸಿ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿದೆ.
ಸಿಂಡಿಕೇಟ್ ಸದಸ್ಯ ಡಾ. ಶರಣಬಸಪ್ಪ ಜೋಳದ ಹೆಡಗಿ ಅವರು ಕಳೆದ ಫೆಬ್ರವರಿಯಲ್ಲಿ ಶ್ರೀಗಳಿಗೆ ಡಾಕ್ಟರೇಟ್ ನೀಡುವಂತೆ ಕುಲಪತಿಗೆ ಮನವಿ ಸಲ್ಲಿಸಿದ್ದರು. ವಿಶ್ವವಿದ್ಯಾಲಯದಿಂದ ಮಂತ್ರಾಲಯ ಶ್ರೀ ಹೆಸರು ಶಿಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಿರುವುದನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ. ಇನ್ನು ಇದೇ ನವೆಂಬರ್ 20ರಂದು ನಡೆಯುವ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ.