ಹೊಸದಿಗಂತ ವರದಿ,ಉಡುಪಿ:
ಯಕ್ಷಗಾನ ಮೇಳದ ರಂಗಸ್ಥಳದಲ್ಲಿ ವೇಷ ಹಾಕಿ ಕುಣಿಯುತ್ತಿದ್ದಾಗ ಕಲಾವಿದರೊಬ್ಬರು ಹೃದಯಾಘಾತಕ್ಕೊಳಗಾಗಿ, ನಂತರ ಕೊನೆಯುಸಿರೆಳೆದ ವಿದ್ರಾವಕ ಘಟನೆ ಮುಂಜಾನೆ ನಡೆದಿದೆ.
ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಹೃದಯಾಘಾತದಿಂದ ಮೃತಪಟ್ಟ ಕಲಾವಿದರಾಗಿದ್ದಾರೆ.
ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎನ್ನುವಲ್ಲಿ ಮಂದಾರ್ತಿ ಯಕ್ಷಗಾನ ಮೇಳದ ‘ಮಹಾಕಲಿ ಮಗದೇಂದ್ರ’ ಪ್ರಸಂಗ ನಡೆಯುತ್ತಿತ್ತು.
ಮುಂಜಾವ 3 ಗಂಟೆ ಸುಮಾರಿಗೆ ಸಾಧು ಕೊಠಾರಿ ಅವರು ‘ಮಾಗಧ’ ಪಾತ್ರ ನಿರ್ವಹಿಸುತ್ತಿದ್ದಾಗ ರಂಗಸ್ಥಳದಲ್ಲೇ ತೀವ್ರ ಅಸ್ವಸ್ಥಗೊಂಡು ಕುಸಿದರು. ಅನಂತರ ತತ್ಕ್ಷಣ ವೇಷ ಕಳಚಿ, ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹಕಲಾವಿದರು, ಸ್ಥಳೀಯರು ಜೊತೆಯಾಗಿ ಅವರನ್ನು ಚಿಕಿತ್ಸಾಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ, ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಸಾಧು ಕೊಠಾರಿ ಅವರು ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿದ್ದರು. ಪ್ರಸ್ತುತ ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಅವರು ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕಳೆದ ನಾಲ್ಕು ದಶಕಗಳಿಂದ ಅಧಿಕ ಕಾಲ ತಿರುಗಾಟ ನಡೆಸಿದ್ದರು.