Saturday, August 13, 2022

Latest Posts

ಮಂದ್ ಸಂಸ್ಕೃತಿ ಆಚರಣೆಯಿಂದ ಕೊಡವರ ಗತ ವೈಭವ ಮರಳಿ ಪಡೆಯಲು ಸಾಧ್ಯ: ಮಂಜು ಚಿಣ್ಣಪ್ಪ

ಹೊಸ ದಿಗಂತ ವರದಿ ಮಡಿಕೇರಿ:

ಒಕ್ಕಾಮೆ-ತಕ್ಕಾಮೆ,ಮಣ್ಣ್-ಮನಸ್ಥಾನ, ಐನ್‌ಮನೆ, ಕೈಮಡ, ಮಂದ್ ಸಂಸ್ಕೃತಿ ನೈಜ ಕೊಡವಾಮೆಯಾಗಿದ್ದು, ಇದನ್ನು ಮನಪೂರ್ವಕವಾಗಿ ಗೌರವಿಸಿ ಆಚರಿಸಿಕೊಂಡು ಬಲಪಡಿಸಿದಾಗ ಕೊಡವ ಜನಾಂಗ ಸ್ವಾಭಾವಿಕವಾಗಿಯೇ ಗತವೈಭವವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂದು ಯುನೈಟೆಡ್ ಕೊಡಗ ಆರ್ಗನೈಝೇಷನ್ (ಯುಕೊ) ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಭಿಪ್ರಾಯಪಟ್ಟರು.

ಅಮ್ಮತ್ತಿ ಒಂಟಿಯಂಗಡಿಯ ಬೈರನಾಡ್‌ನ ಪಚ್ಚಾಟ್ ಊರ್ ಮಂದ್‌ನಲ್ಲಿ 7ನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡವ ಸಂಸ್ಕೃತಿಯ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಗಟ್ಟಿಗೊಳಿಸಲು ಮುಂದಾಗಬೇಕಾಗಿದೆ ಎಂದು ಹೇಳಿದರು.

ಕೊಡವ ಜನಾಂಗದಲ್ಲಿ ಒಗ್ಗಟ್ಟು ಇಲ್ಲ ಎಂದು ಹಿರಿಯರು ಕೊರಗುತ್ತಿದ್ದರು. ಆದರೆ, ಹಿಂದೊಮ್ಮೆ ಒಗ್ಗಟ್ಟು ಇತ್ತು ಎಂಬುದು ಹಿರಿಯರ ಭಾವನೆಯಾಗಿತ್ತು. ಅದನ್ನು ಹುಡುಕಿಕೊಂಡು ಹೋದಾಗ ನಿರ್ಲಕ್ಷಿಸಲ್ಪಟ್ಟ ಮಂದ್ ತಕ್ಕಾಮೆ, ಒಕ್ಕಾಮೆ ವಿಚಾರ ಅರ್ಥವಾಗಿದೆ. ಇವುಗಳು ಕೊಡವರನ್ನು ಒಂದೆಡೆ ಸೇರಿಸುವ ತಾಣವಾಗಿದ್ದವು. ಇದನ್ನು ಬಲಪಡಿಸಿದಾಗ ಸ್ವಾಭಾವಿಕವಾಗಿ ಕೊಡವರು ಗತವೈಭವವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದರ ನೆರಳಿನಲ್ಲಿ ಬೆಳೆದ ಕೊಡವ ಎಂತಹ ಸವಾಲುಗಳನನ್ನೂ ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಲು ಸ್ವಾಭಾವಿಕವಾಗಿ ಸಜ್ಜಾಗಿರುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಫಿ.ಮಾ.ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಮಾತನಾಡಿ, ಯುಕೊ ಮಂದ್ ನಮ್ಮೆ ಜಾಗೃತಿಯಿಂದ ಮುಚ್ಚಿ ಹೋಗಿದ್ದ ಹಲವಾರು ಮಂದ್‌ಗಳು ತೆರೆದಿವೆ. ಮಂದ್‌ಗಳ ಮಹತ್ವವನ್ನು ಈ ಕಾರ್ಯಕ್ರಮ ತಿಳಿಸಿಕೊಟ್ಟಿದೆ. ಮಂದ್ ಸಂಸ್ಕೃತಿ ಕೊಡವ ಸಂಸ್ಕೃತಿಯ ಬೇರಾಗಿದೆ. ಮಂದ್ ಹಾಗೂ ತಕ್ಕಾಮೆಗಳು ಕೊಡವರಿಗೆ ಮಾರ್ಗದರ್ಶನವನ್ನು ನೀಡುತ್ತವೆ.ಇವುಗಳ ಪ್ರಾಮುಖ್ಯತೆಯನ್ನು ಯುಕೊ ಸಂಘಟನೆಯ ಕಾರ್ಯಕ್ರಮಗಳು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಪ್ರಶಂಸಿಸಿದರು.

ಮತ್ತೊಬ್ಬ ಅತಿಥಿ ಮುಕ್ಕಾಟೀರ ಕ್ಯಾ. ರಘು ಮಾದಪ್ಪ ಮಾತನಾಡಿ ,ಇತರ ಧರ್ಮದವರಿಗೆ ಚರ್ಚ್, ದೇವಸ್ಥಾನ, ಮಸೀದಿಯಂತೆ ಕೊಡವ ಜನಾಂಗದವರಿಗೆ ಐನ್‌ಮನೆ, ಕೈಮಡ, ಮಂದ್ ಪವಿತ್ರ ಸ್ಥಳವಾಗಿದ್ದು, ಇವುಗಳ ಆಚರಣೆ ಹಾಗೂ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಜಿಲ್ಲೆಯಲ್ಲಿರುವ ಹಲವಾರು ಮಂದ್‌ಗಳು ಆರ್‌ಟಿಸಿಯಲ್ಲಿ ಪೈಸಾರಿ ಎಂದು ಇದ್ದು, ಇವುಗಳನ್ನು ಸೂಕ್ತ ರೀತಿಯ ದಾಖಲಾತಿಯ ಮೂಲಕ ಕಾಪಾಡಬೇಕಾಗಿದೆ. ಬಲ್ಯಮನೆ, ಕೈಮಡ, ಮಂದ್‌ಗಳ ರಕ್ಷಣೆಗೆ ಟ್ರಸ್ಟ್ ಮಾಡುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.

ಡಾ. ಅಪ್ಪನೆರವಂಡ ಸೋನಿಯಾ ಮಂದಪ್ಪ ಅವರು ಮಾತನಾಡಿ, ಕೊಡವರು ತನ್ನದೇ ಆದ ಪದ್ದತಿ ಪರಂಪರೆ, ಸಂಸ್ಕೃತಿಯಲ್ಲಿ ಬಾಳಿ ಬದುಕಿದ ಜನಾಂಗ. ಜನ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇಂತಹ ಹಿನ್ನೆಲೆ ಇರುವ ಜನಾಂಗವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಮುಂದಿನ ಮಂದ್ ನಮ್ಮೆಗೆ ಬರುವಾಗ ಜನಾಂಗಕ್ಕೆ ಪ್ರತಿಯೊಬ್ಬರೂ ತಮ್ಮಿಂದ ಕೊಡುಗೆ ನೀಡುವ ಸಂಕಲ್ಪವನ್ನು ತೊಡಬೇಕು. ಯಾವುದೇ ರೂಪದಲ್ಲಿಯಾದರೂ ಜನಾಂಗದ ಬೆಳವಣಿಗೆ, ರಕ್ಷಣೆ, ಹಿತಾಸಕ್ತಿಗೆ ಪೂರಕವಾದ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಕೈ ಜೋಡಿಸಿ ಮುಂದಿನ ಮಂದ್ ನಮ್ಮೆಯಲ್ಲಿ ಲಿಖಿತವಾಗಿ ಪ್ರಕಟಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಗೋಣಿಕೊಪ್ಪ ಲೋಪಮುದ್ರ ಮೆಡಿಕಲ್ ಸೆಂಟರ್‌ನ ಡಾ. ಅಮೃತ್ ನಾಣಯ್ಯ ಮಾತನಾಡಿ ಕೊಡವಾಮೆ ಉಳಿಯಬೇಕು, ಬೆಳೆಯಬೇಕು ಎನ್ನುವ ಮಾತು ಬಹಳಷ್ಟು ವರ್ಷದಿಂದ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳಿಗೆ ಕೊಡವ ಭಾಷೆ ಕಲಿಸಿ ಮಾತನಾಡಬೇಕು. ಇಂಗ್ಲಿಷ್ ಭಾಷೆಯನ್ನು ಶಾಲೆಯಲ್ಲಿ ಕಲಿಸುತ್ತಾರೆ ಎಂದು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಹಾಗೂ ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮನೆಯಂಡ ಕಾಂತಿ ಸತೀಶ್ ಮಾತನಾಡಿದರು.

ವೇದಿಕೆಯಲ್ಲಿ ಆರಾಯಿರ ನಾಡ್ ಪೂಮಾಲೆ ಮಂದ್ ತಕ್ಕರಾದ ಅಜ್ಜಿನೀಕಂಡ ಸುಧೀರ್, ಉದ್ಯಮಿ ಕ್ಯಾಂಟ್ ಸಂಸ್ಥಾಪಕ ಗುಮ್ಮಟ್ಟೀರ ಕಿಶು ಉತ್ತಪ್ಪ, ಡಾ. ಕಾಳಿಮಾಡ ಶಿವಪ್ಪ, ಬೈರನಾಡ್‌ರ ಮಂದ್ ತಕ್ಕ ಮುಕ್ಕಾಟೀರ ಮುತ್ತಣ್ಣ, ಹಾಲುಗುಂದ ಊರ್ ತಕ್ಕದ ಮೇಕೇರಿರ ನಾಣಯ್ಯ, ಚೆಂಬೆಬೆಳ್ಳೂರ್ ತಕ್ಕ ಕೊಳುವಂಡ ರಾಜರಾಮ್, ಕಣ್ಣಂಗಾಲ ಗ್ರಾಪಂ ಸದಸ್ಯರಾದ ಸೋಮೆಯಂಡ ಪುನಿತ್ ಪೂಣಚ್ಚ, ಮಂಡೇಪಂಡ ವನಿತಾ ಭೀಮಯ್ಯ, ಅಮ್ಮತ್ತಿ ಒಂಟಿಯಂಗಡಿ ಕೊಡವ ಅಸೋಸಿಯೇಷನ್ ಅಧ್ಯಕ್ಷ ಪಾಲೆಕಂಡ ಸಾಯಿ ಕರುಂಬಯ್ಯ, ಕೊಡವ ಅಸೋಸಿಯೇಷನ್ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಂಞಂಡ ಸೀತಮ್ಮ ಜಗ್ಗು, ಪಚ್ಚಟಾ ಊರ್ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಮಚ್ಚಾರಂಡ ರೀನಾ ಗಿರೀಶ್, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್‌ ಉತ್ತಪ್ಪ, ಬೆಂಗಳೂರು ಕೊಡವ ಸಮಾಜದ ಯೂತ್ ಕೌನ್ಸಿಲ್ ಅಧ್ಯಕ್ಷ ಚೋಕಂಡ ಸೂರಜ್, ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಹಿರಿಯರಾದ ಪುಟ್ಟಿಚಂಡ ದಾದ ಮುತ್ತಪ್ಪ, ಪುಟ್ಟಿಚಂಡ ಅಯ್ಯಣ್ಣ, ಟ್ರೋಫಿ ದಾನಿಗಳಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಚೆಂಬಂಡ ದಶಗಣಪತಿ, ಕಳ್ಳಿಚಂಡ ರತ್ನಪೂವಯ್ಯ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss