ಹೊಸದಿಗಂತ ವರದಿ, ಕೊಡಗು:
ಮಕ್ಕಳನ್ನು ಹೃದಯ ವೈಶಾಲ್ಯದಿಂದ ನೋಡಿಕೊಳ್ಳಬೇಕು.ಇದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ವೃದ್ಧಿಯಾಗುತ್ತದೆ. ಮಾನವೀಯ ಗುಣಗಳಿಂದ ಮಕ್ಕಳ ಪೋಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಪರಶುರಾಮ್ ನುಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಭಾಗಿತ್ವದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ಮಕ್ಕಳ ಪಾಲನಾ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿಯ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ನಮ್ಮ ಸಂಪತ್ತು, ಮಕ್ಕಳನ್ನು ಕಾಪಾಡುವ ಜವಾಬ್ದಾರಿಯು ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯ ಕಾರ್ಯವಾಗಿದೆ. ಸಂಸ್ಥೆಯಲ್ಲಿ ಮಗುವಿನ ಸಂಪೂರ್ಣ ಮಾಹಿತಿ ಇರಬೇಕು. ಮತ್ತು ಜೆಜೆ ಆಕ್ಟ್, ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು ಮಾತನಾಡಿ ತಾಯಿಯ ಮಮತೆ, ತಂದೆಯ ಜವಾಬ್ದಾರಿ ಒಂದು ಕುಟುಂಬಕ್ಕೆ ಅಗತ್ಯ. ಅದೇ ರೀತಿ ಮಕ್ಕಳ ಪೋಷಣಾ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು.ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡರೆ ಅವರ ಮುಂದಿನ ಭವಿಷ್ಯವೂ ವೃದ್ಧಿಯಾಗುತ್ತದೆ ಎಂದರು.
ಸಂಸ್ಥೆಗಳಿಗೆ ಹಲವು ರೀತಿಯ ಸಮಸ್ಯೆಗಳು ಬರುವುದು ಸಹಜ, ಅದನ್ನು ಮೆಟ್ಟಿ ನಿಲ್ಲಬೇಕು, ಮಕ್ಕಳ ಪೋಷಣಾ ಸಂಸ್ಥೆಗಳು ಮಗುವಿಗೆ ಉನ್ನತ ಸ್ಥಾನವನ್ನು ಕೊಟ್ಟಾಗ ಮಾತ್ರ ಮಗುವಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುತ್ತದೆ. ಕಾನೂನಿನ ಬಗ್ಗೆ ತಿಳಿದುಕೊಂಡು ಸಂಸ್ಥೆಯನ್ನು ನಡೆಸಿ ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗುವ ಸಂಭವ ಬರುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಯ್ ಡೇವಿಡ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ನಮಿತಾ, ಕುಮಾರಿ, ಉಷಾ, ಸಮಾಜ ಸೇವಕಿ ಲಕ್ಷ್ಮಿ ಪ್ರಸನ್ನ, ಮಕ್ಕಳ ವಿಶೇಷ ಪೊಲೀಸ್ ಘಟಕದ ಮೇಲ್ವೀಚಾರಕಿ ಸುಮತಿ, ವಿವಿಧ ಮಕ್ಕಳ ಪೋಷಣಾ ಸಂಸ್ಥೆಗಳ ಸದಸ್ಯರು, ಮತ್ತಿತರರು ಇದ್ದರು.