Tuesday, August 16, 2022

Latest Posts

ಮಗನ ಹತ್ಯೆಗೆ ಹಾಕಿದ್ದ ಸ್ಕೆಚ್‌ಗೆ ತಾಯಿ ಬಲಿ!

ಹೊಸ ದಿಗಂತ ವರದಿ, ಚಿತ್ರದುರ್ಗ:

ಪ್ರೀತಿಸುತ್ತಿದ್ದ ಯುವತಿ ಪ್ರೀತಿಸಿದವನನ್ನು ಬಿಟ್ಟು ಬೇರೆ ಮದುವೆಯಾದ ವಿಚಾರವಾಗಿ ತನ್ನನ್ನು ರೇಗಿಸುತ್ತಿದ್ದ ಯುವಕನ ಹತ್ಯೆಗೆ ಹಾಕಿದ್ದ ಪಾಗಲ್ ಪ್ರೇಮಿಯ ಸ್ಕೆಚ್‌ಗೆ ಯುವಕನ ತಾಯಿ ಬಲಿಯಾಗಿರುವ ಘಟನೆ ಚಿತ್ರದುರ್ಗ ನಗರದ ಹೊರಪೇಟೆಯಲ್ಲಿ ನಡೆದಿದೆ.
ಆರೋಪಿ ಇಮ್ತಿಯಾಜ್ ಎಂಬಾತ ಹೊಸದುರ್ಗ ಮೂಲದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆತ ಪ್ರೀತಿಸಿದ ಯುವತಿ, ಇಮ್ತಿಯಾಜ್‌ನನ್ನು ಬಿಟ್ಟು ಬೇರೆ ಮದುವೆಯಾಗಿದ್ದಳು. ಈ ವಿಚಾರವಾಗಿ ಮೆಹಫೂಸ್ ಇಲಾಹಿ ಎಂಬ ಯುವಕ ಇಮ್ತಿಯಾಜ್‌ನನ್ನು ರೇಗಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಇಮ್ತಿಯಾಜ್ ಎಂಬ ಆರೋಪಿ ಮೆಹಫೂಸ್ ಇಲಾಹಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ.
ಗುರುವಾರ ರಾತ್ರಿ 10.30ರ ಸುಮಾರಿಗೆ ಮೆಹಫೂಸ್ ಇಲಾಹಿ ಮನೆಯ ಮೇಲೆರಿದ ಇಮ್ತಿಯಾಜ್ ಮನೆ ಮೇಲಿದ್ದ ನೀರಿನ ಟ್ಯಾಂಕ್‌ನ ವಾಲ್ವ್ ಬಂದ್ ಮಾಡಿದ್ದಾನೆ. ಮನೆಯೊಳಗಿನ ನಲ್ಲಿಯಲ್ಲಿ ನೀರು ಬರುವುದು ನಿಂತಾಗ ನೀರು ಪೂರೈಕೆ ಟ್ಯಾಂಕ್ ಪರಿಶೀಲಿಸಲು ಯುವಕ ಮೆಹಫೂಸ್ ಇಲಾಹಿ ತನ್ನ ತಾಯಿ ಫರ್ಹಾನಾ ಬಾನು ಜೊತೆಗೂಡು ಮನೆಯ ಮೇಲಕ್ಕೆ ಹೋಗಿದ್ದಾರೆ.
ಇದೇ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿ ಇಮ್ತಿಯಾಜ್ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಮಗ ಮೆಹಫೂಸ್ ಇಲಾಹಿಯನ್ನು ರಕ್ಷಿಸಲು ತಾಯಿ ಫರ್ಹಾನ ಬಾನುವಿಗೆ ಚಾಕುವಿನಿಂದ ಇರಿದು ಮೆಟ್ಟಿಲಿನಿಂದ ಕೆಳಗೆ ನೂಕಿದ್ದಾನೆ. ಬಳಿಕ ಇಲಾಹಿಯ ಮೇಲೂ ದಾಳಿ ಮಾಡಿದ್ದಾನೆ. ಅರಚಾಟ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಜಮಾಯಿಸುತ್ತಿದ್ದಂತೆ ಆರೋಪಿ ಇಮ್ತಿಯಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ತಾಯಿ, ಮಗನನ್ನು ನೋಡಿದ ಅಕ್ಕಪಕ್ಕದ ಮನೆಯವರು ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಫರ್ಹಾನಾ ಬಾನು ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಮೆಹಫೂಸ್ ಇಲಾಹಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ರಕ್ಷಣಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss