ಮಟಪಾಡಿಯಲ್ಲಿ ಬೆಂಕಿ ಉಂಡೆ ಎಸೆದು ಹೋಳಿ ಆಚರಣೆ!: ಚಪ್ಟೆಗಾರ್ ಸಮುದಾಯ

0
117

ಉಡುಪಿ: ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ನಡೆಯುತ್ತಿದೆ. ಉತ್ತರ ಭಾರತದ ಕಡೆ ಒಬ್ಬರಿಗೊಬ್ಬರು ಬಣ್ಣದ ನೀರನ್ನು – ರಂಗಿನ ಪುಡಿಯನ್ನು ಎರಚಿ ಹೋಳಿ ಹಬ್ಬದ ಆಚರಣೆ ಮಾಡುತ್ತಾರೆ. ಕರ್ನಾಟಕದ ಕರಾವಳಿಯಲ್ಲಿ ಹೋಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಬೆಂಕಿ ಉಂಡೆಯನ್ನು ಎಸೆದು ಹಬ್ಬದ ಆಚರಣೆ ಮಾಡಿದ್ದಾರೆ!

ಹೌದು, ಬ್ರಹ್ಮಾವರ ತಾಲೂಕಿನಲ್ಲಿ ಮಟಪಾಡಿಯಲ್ಲಿ ಇಂತಹ ಬೆಂಕಿ ಚೆಂಡು ಎಸೆಯುವ ಮೂಲಕ ವಿಶಿಷ್ಟ ಹೋಳಿ ಆಚರಣೆ ನಡೆಯಿತು. ಮಡಪಾಡಿ ವ್ಯಾಪ್ತಿಯ ಚಪ್ಟೆಗಾರ್ ಸಮುದಾಯ ವಿಭಿನ್ನವಾಗಿ ಹೋಳಿ ಆಚರಣೆಯನ್ನು ಮಾಡಿತು.
ಯಕ್ಷಗಾನವನ್ನು ಹೋಲುವ ವಿಶೇಷ ವೇಷ ಧರಿಸುವ ಚಪ್ಟೆಗಾರ್ ಸಮುದಾಯದವರು ಸುತ್ತಮುತ್ತಲ ಮನೆಗಳ ಅಂಗಳದಲ್ಲಿ, ಅಂಗಡಿ ಮುಂಭಾಗದಲ್ಲಿ ಹೋಳಿ ಕುಣಿತವನ್ನು ಮಾಡುತ್ತಾರೆ. ಕೊನೆಗೆ ಹೋಲಿಕಾ ದಹನ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ  ಸಮುದಾಯ, ಬೇರೆ ಸಮುದಾಯದ ಜನರನ್ನು ಈ ಆಚರಣೆಗೆ ಆಹ್ವಾನಿಸುತ್ತಾರೆ.

ಕೈಯಲ್ಲಿ ಉರಿಯುವ ತೆಂಗಿನಕಾಯಿ!: ಗದ್ದೆಯಲ್ಲಿ ನೆರೆದ ಪ್ರತಿಯೊಬ್ಬರ ಕೈಗೂ ತೆಂಗಿನ ಕಾಯಿಯನ್ನು ಕೊಡಲಾಗುತ್ತದೆ. ಬಳಿಕ ಆ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಉರಿಯುವ ತೆಂಗಿನ ಕಾಯಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಎಸೆಯಲಾಗುತ್ತದೆ. ಬೆಂಕಿಯ ಉಂಡೆಯನ್ನು ಕತ್ತಲಿನಲ್ಲಿ ಎಸೆಯುವ ಆಚರಣೆ ಬಹಳ ರೋಚಕ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಕೊನೆಗೆ ತೆಂಗಿನಕಾಯಿಯ ಬೆಂಕಿ ನಂದಿದ ನಂತರ ಕಾಯಿಯನ್ನು ಒಡೆದು ಬೆಂದ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಅಲ್ಲಿ ಸೇರಿದ್ದ ಭಕ್ತರಿಗೆ ವಿತರಿಸಲಾಗುತ್ತದೆ.

ಸೋಮವಾರ ರಾತ್ರಿ ಮಟಪಾಡಿ ಗದ್ದೆಯಲ್ಲಿ ಚಪ್ಟೆಗಾರ್ ಸಮುದಾಯ ಹಿರಿಯರು – ಕಿರಿಯರು ಸೇರಿ ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here