ಹೊಸದಿಗಂತ ವರದಿ, ಮೈಸೂರು:
ಕುರುಬರನ್ನು ಒಗ್ಗೂಡಿಸಲು ಕನಕಪೀಠ ಕಟ್ಟಿದೆವು. ಮಠ ಕಟ್ಟುವುದು ಅಷ್ಟು ಸುಲಭದ ಕೆಲಸ ಅಲ್ಲ. ಮಠದ ಮೂಲಕ ಸಮುದಾಯ ಸಂಘಟನೆ ಆಗದೇ ಹೋಗಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ ಎಂದು ಬಿಜೆಪಿಯ ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮಂಗಳವಾರ ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನಡೆದ ಕುರುಬ ಸಮುದಾಯವನ್ನು ಎಸ್ಟಿ ಸೇರಿಸುವ ಹೋರಾಟ ಸಮಿತಿಯ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುರುಬ ಸಮುದಾಯದ ಅಸ್ಮಿತೆಗಾಗಿ ಹೋರಾಟ ರೂಪಿಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಮಗೆ ಸಿಗಬೇಕಾದ ಸೌಕರ್ಯ ನೀಡಬೇಕೆಂದು ಕೇಳುತ್ತಿದ್ದೇವೆ. ಹೋರಾಟ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕುರುಬರು ಅತ್ಯಂತ ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ಜಗತ್ತಿನಾದ್ಯಂತ ಬೇರೆ, ಬೇರೆ ಹೆಸರಿನಲ್ಲಿ ಇದ್ದೇವೆ. ಸಮುದಾಯದ ಅಸ್ಮಿತೆಗಾಗಿ ಹೋರಾಟ ರೂಪಿಸುತ್ತಿದ್ದು, ಈ ಹಿಂದೆಯೂ ಹಲವಾರು ಹೋರಾಟ, ಸಾಧನೆ ಮಾಡಿದ್ದೇವೆ ಎಂದರು.
ರಾಜಕೀಯ, ಔದ್ಯೋಗಿಕ, ಶೈಕ್ಷಣಿಕವಾಗಿ ನಾವು ಬೆಳೆಯಬೇಕಿದೆ. ಅದಕ್ಕಾಗಿ ನಮಗೆ ಎಸ್ಟಿ ಗೆ ಸೇರಿಸಬೇಕಾಗಿದೆ. ಹೋರಾಟ ಯಾಕೇ ಬೇಕು ಅಂತ ಕೇಳೋದಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ತಿರುಗೇಟು ನೀಡಿದರು. ಹೋರಾಟದ ಫಲವಾಗಿ ಸರ್ಕಾರ ವಾಲ್ಮೀಕಿ ಸಮುದಾಯ ಎಸ್.ಟಿ.ಗೆ ಸೇರಿತು. ಮೀಸಲಾತಿ ಪರಿಣಾಮವಾಗಿ 15 ಶಾಸಕರು, 3 ಸಂಸದರು ಆಯ್ಕೆಯಾದರು. ಅದು ನಮಗೆ ಬೇಡವೇ? ಎಂದು ಪ್ರಶ್ನಿಸಿದರು.
ಹೋರಾಟವಿಲ್ಲದೆ ದೇಶಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ರೈತ,ಕಾರ್ಮಿಕ,ಮಹಿಳಾಹೀಗೆ ಹಲವಾರು ಹೋರಾಟಗಳು ನಡೆದಿವೆ. ಈಗ ಎಸ್ಟಿ ಮೀಸಲಾತಿ ಪ್ರಮಾಣ ಶೇ.3 ಇರಬಹುದು. ಮುಂದೆ ಅದು ಶೇ.18, 20 ಅಥವಾ 21 ಆಗಬಹುದು ಎಂದು ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಸಿಎಂ ಆಗಲು ಕುರುಬರು ತನು, ಮನ, ಧನ ಅರ್ಪಿಸಿಲ್ಲವೇ?
ಸಿದ್ದರಾಮಯ್ಯ ಅವರು ನಮ್ಮ ಜತೆಗೆ ಇದ್ದಾರೆ. ಯಾಕೆ ವಿರೋಧ ಮಾಡುತ್ತಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ರಾಜ್ಯಾದ್ಯಂತ ಕುರುಬರು ತನು, ಮನ, ಧನ ಅರ್ಪಿಸಿಲ್ಲವೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹೆಸರಿನಲ್ಲಿ ಯಾರೋ ವಿರೋಧ ಮಾಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನನ್ನೇ ಬ್ರಿಟಿಷರಿಗೆ ಹಿಡಿದುಕೊಟ್ಟವರು ನಮ್ಮಲ್ಲೇ ಇದ್ದರು. ಅಂತವರು ಯಾರೋ ಇದ್ದೇ ಇರುತ್ತಾರೆ. ಅಂಥವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ಹೋರಾಟ ಅಚಲವಾಗಿದೆ. ಸರ್ಕಾರಕ್ಕೆ ಮುಟ್ಟುವ ಭರವಸೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸದುರ್ಗದ ಶ್ರೀ ಈಶ್ವರಾನಾಂದಪುರಿ ಸ್ವಾಮೀಜಿ ಮಾತನಾಡಿ, ಕುರುಬರನ್ನು ಎಸ್ಟಿಗೆ ಸೇರಿಸುವ ಹೋರಾಟ ಆರಂಭ ಆಗಿದ್ದೇ ಸಿದ್ದರಾಮಯ್ಯ ಮನೆಯಿಂದ. ನಾನು ಮತ್ತು ಶ್ರೀ ನಿರಂಜನಾನ0ದಪುರಿ ಸ್ವಾಮೀಜಿ ಮೊದಲು ಹೋಗಿದ್ದೇ ಸಿದ್ದರಾಮಯ್ಯ ಮನೆಗೆ. ಯಾಕೆಂದರೆ ರಾಜ್ಯದ ಕುರುಬರಿಗೆ ಸಿದ್ದರಾಮಯ್ಯ ಯಜಮಾನ ಎಂದು ಹೇಳಿದರು.
ಹೋರಾಟದ ಅಗತ್ಯವಿದೆ ಅಂತ ಸಿದ್ದರಾಮಯ್ಯನವರೇ ಹೇಳಿದ್ದರು: ಕುರುಬರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದರು. ಬಳಿಕ ಕೆ.ಎಸ್.ಈಶ್ವರಪ್ಪ ಅವರ ಮನೆಗೆ ಹೋಗಿದ್ದೆವು. ಹೋರಾಟದಲ್ಲಿ ಸ್ಪಷ್ಟತೆ ಇಲ್ಲದೇ ಇದ್ದರೆ, ಒಗ್ಗಟು ಇಲ್ಲದೇ ಹೋದರೆ, ಹೋರಾಟ ಯಶಸ್ವಿಯಾಗದು. ಯಾರು ಬರಲಿ, ಬಾರದೆ ಇರಲಿ. ನಾವಂತೂ ಹೋರಾಟ ಶುರು ಮಾಡಿದ್ದೇವೆ. ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಸಮಿತಿಯ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಸಮಿತಿ ಖಜಾಂಚಿಗಳಾದ ಕೆ.ಈ. ಕಾಂತೇಶ್, ಸಮಾಜದ ಹಿರಿಯ ಮುಖಂಡರಾದ ಎಸ್.ಪುಟ್ಟಸ್ವಾಮಿ, ಟಿ.ಬಿ.ಬೆಳಗಾವಿ, ಆನೇಕಲ್ ದೊಡ್ಡಯ್ಯ, ಶಿವಕುಮಾರ್, ಅಣ್ಣೇಗೌಡ, ಕೆ.ಬಿ.ಶಾಂತಪ್ಪ, ನವೀನ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.