ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಮತ್ತೆ ದಿನೇದಿನೇ ಏರಿಗತಿಯಲ್ಲಿ ಸಾಗುತ್ತಿದ್ದು, ಗುರುವಾರ ಬೆಳಗ್ಗೆ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವುದರ ಜೊತೆಗೆ ಒಬ್ಬರು ಮೃತಪಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ನಗರದ ಖಾಸಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದ ಮಡಿಕೇರಿ ಆಜಾದ್ನಗರದ 54 ವರ್ಷದ ಮಹಿಳೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ಬುಧವಾರ ರಾತ್ರಿ 7.30ಕ್ಕೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ರಾತ್ರಿ 8.45ಕ್ಕೆ ಸಾವಿಗೀಡಾಗಿದ್ದಾರೆ. ಅವರ ಗಂಟಲು ದ್ರವ ಮಾದರಿಯನ್ನು ಆಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಿದಾಗ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 385ಕ್ಕೆ ಹಾಗೂ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾದಂತಾಗಿದ್ದು, ಸೋಂಕಿತರ ಪೈಕಿ 272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಗುರುವಾರ ಸೋಮವಾರಪೇಟೆ ತಾಲೂಕಿನ ಹುಲುಸೆ ಗ್ರಾಮವೊಂದರಲ್ಲೇ 7ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಗ್ರಾಮದ 45, 40, 23 ವರ್ಷದ ಮಹಿಳೆಯರು ಹಾಗೂ 2 ವರ್ಷದ ಬಾಲಕಿ, 52, 33 ಹಾಗೂ 27 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಮಡಿಕೇರಿ ತಾಲೂಕಿನ ಎಮ್ಮೆಮಾಡುವಿನಲ್ಲಿ 52 ವರ್ಷದ ಪುರುಷ, ವೀರಾಜಪೇಟೆ ತಾಲೂಕಿನ ಸಿದ್ದಾಪುರದ 64 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ 33 ವರ್ಷದ ಪುರುಷ ಮತ್ತು ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಪರೀಕ್ಷೆಗೆ ಒಳಪಟ್ಟ ಮಡಿಕೇರಿ ಮಹದೇವಪೇಟೆಯ ಎವಿ ಶಾಲೆಯ ಬಳಿಯ 54 ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ವಿಳಂಬ ಸಲ್ಲದು: ಕೊಡಗು ಜಿಲ್ಲೆಯಲ್ಲಿ ಮೃತಪಟ್ಟ 8 ಪ್ರಕರಣಗಳ ಪೈಕಿ ಎರಡು ಪ್ರಕರಣಗಳು ಕೋವಿಡ್ ಆಸ್ಪತ್ರೆಯ ಚಿಕಿತ್ಸಾ ನಿರ್ಧಾರ ಪದೇಶಕ್ಕೆ ಬಂದ ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಸಂಭವಿಸಿದ್ದು, ಒಂದು ಪ್ರಕರಣದಲ್ಲಿ ಕೋವಿಡ್ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿಯೇ ಸಾವು ನಡೆದಿದೆ. ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲೂ ಉಸಿರಾಟದ ತೊಂದರೆಯಿದ್ದು, ಕೋವಿಡ್ ಆಸ್ಪತ್ರೆಗೆ ತಡವಾಗಿ ಬಂದ ಪ್ರಕರಣಗಳಾಗಿವೆ ಎಂದಿರುವ ಜಿಲ್ಲಾಧಿಕಾರಿಗಳು, ಆದ್ದರಿಂದ ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಮನವಿ ಮಾಡಿದ್ದಾರೆ.