Saturday, June 25, 2022

Latest Posts

ಮಡಿಕೇರಿಯಲ್ಲಿ ವೀರಯೋಧ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಜನ್ಮ ದಿನಾಚರಣೆ

ಹೊಸ ದಿಗಂತ ವರದಿ, ಮಡಿಕೇರಿ:

1965ರ ಭಾರತ-ಪಾಕ್ ನಡುವಿನ ಯದ್ಧದಲ್ಲಿ ಸಾಹಸ ಮೆರೆದು ಹುತಾತ್ಮರಾದ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ 88ನೇ ಜನ್ಮ ದಿನವನ್ನು ಗುರುವಾರ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಸ್ಕ್ವಾ.ಲೀ. ಅಜ್ಜಮಾಡ ಬಿ.ದೇವಯ್ಯ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ದೇವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, 1965ರ ಸೆ.7 ರಂದು ನಡೆದ ಭಾರತ, ಪಾಕಿಸ್ತಾನ ನಡುವಿನ ಯುದ್ಧದಲ್ಲಿ ದೇವಯ್ಯ ಅವರು ಸೇನಾ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು. ಇವರ ಸಾಹಸಗಾಥೆಯನ್ನು ಬ್ರಿಟಿಷ್ ಪತ್ರಕರ್ತ ತಮ್ಮ ಬರವಣಿಗೆ ಮೂಲಕ ವಿವರಿಸದೇ ಇದ್ದಿದ್ದರೆ ಇಂದು ಸ್ಕ್ವಾ.ಲೀ.ದೇವಯ್ಯ ಅವರ ಬಲಿದಾನದ ಬಗ್ಗೆ ಯಾರಿಗೂ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ವೀರಯೋಧರ ಸ್ಮರಣೆಯ ಮೂಲಕ ಗೌರವ ಸಲ್ಲಿಸುವುದರೊಂದಿಗೆ ಪ್ರತಿಯೊಬ್ಬರೂ ದೇಶಾಭಿಮಾನವನ್ನು ಮೆರೆಯಬೇಕೆಂದು ಕರೆ ನೀಡಿದರು.
ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್‍ನ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರು ಮಾತನಾಡಿ, 1920 ಡಿ.24 ರಂದು ಶ್ರೀಮಂಗಲನಾಡು ಕುರ್ಚಿ ಗ್ರಾಮದಲ್ಲಿ ಅಜ್ಜಮಾಡ ಬೋಪಯ್ಯ ಅವರ ಪುತ್ರರಾಗಿ ಜನಿಸಿದ ಸ್ಕ್ವಾ.ಲೀ.ದೇವಯ್ಯ ಅವರು ಭಾರತದ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಕ್ಕಾಗಿ ಬಲಿದಾನಗೈದರು. ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ದೇವಯ್ಯ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಸಂಗಡಿಗರ ನಿರಂತರ ಪ್ರಯತ್ನದಿಂದ ಇಂದು ಸ್ವ್ಕಾ.ಲೀ.ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಗಿದ್ದು, ಈ ರೀತಿಯ ಕಾರ್ಯ ಶ್ಲಾಘನೀಯವೆಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಬೋಪಣ್ಣ, ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಪ್ರಮುಖರಾದ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ತೆನ್ನಿರ ಮೈನಾ, ಅಜ್ಜಮಾಡ ಕುಟುಂಬಸ್ಥರು, ನಿವೃತ್ತ ಯೋಧರು ಹಾಜರಿದ್ದು ವೀರಯೋಧನಿಗೆ ಗೌರವ ಅರ್ಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss