ಹೊಸದಿಗಂತ ವರದಿ ಮಡಿಕೇರಿ:
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಬಿವಿಪಿ ಮಂಗಳೂರು ವಿಭಾಗದ ಪ್ರಮುಖ ಕೇಶವ ಬಂಗೇರ ಕರೆ ನೀಡಿದ್ದಾರೆ.
ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ನಗರದ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರ ಜೀವನ ಚರಿತ್ರೆಯನ್ನು ವಿವರಿಸಿದರು.
ಈ ಮಹಾನ್ ಪುರುಷನ ಚಿಂತನೆಗಳು ಹಾಗೂ ಆದರ್ಶಗಳನ್ನು ಸಾಕಾರಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಬಿವಿಪಿಯ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿಚಾರಧಾರೆ ಮತ್ತು ವಿವೇಕಾನಂದರ ಕನಸಿನ ಭಾರತದ ಕುರಿತು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಚಿ.ನಾ.ಸೋಮೆಶ್ ಶಕ್ತಿಯುತ ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ದೊಡ್ಡದಾಗಿದೆ ಎಂದರು.
ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಕೊಡವ ಸಮಾಜದವರೆಗೆ 400 ಮೀಟರ್ ಉದ್ದದ ಬೃಹತ್ ತಿರಂಗಯಾತ್ರೆ ನಡೆಸಿ ವಿವೇಕಾನಂದರ ಸಂದೇಶಗಳನ್ನು ಸಾರಿದರು.
ರಕ್ಷಿತಾ ಆಳ್ವ ಪ್ರಾರ್ಥಿಸಿ, ಹರ್ಷಿತಾ ಶೆಟ್ಟಿ ನಿರೂಪಿಸಿದರು. ಎಬಿವಿಪಿ ಮಡಿಕೇರಿ ನಗರ ಕಾರ್ಯದರ್ಶಿ ದರ್ಶನ್ ವಂದಿಸಿದರು.