ಮಡಿಕೇರಿ: ಮನೆಯೊಂದರ ಬೀಗ ಮುರಿದು ಸುಮಾರು 1.94 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ಕಳವು ಮಾಡಿದ ಪ್ರಕರಣವನ್ನು ಪ್ರಕರಣ ದಾಖಲಾದ ಕೇವಲ ಮೂರು ದಿನಗಳಲ್ಲಿ ಪತ್ತೆ ಮಾಡುವಲ್ಲಿ ನಾಪೋಕ್ಲು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ವೀರಾಜಪೇಟೆ ತಾಲೂಕಿನ ಬೊಳ್ಳುಮಾಡು ನಿವಾಸಿ ಕೂಲಿ ಕಾರ್ಮಿಕ ಹೆಚ್.ಕೆ. ಮಹೇಶ್ ಅಲಿಯಾಸ್ ನವೀನ(39) ಅದೇ ಗ್ರಾಮದ ಕೂಲಿ ಕಾರ್ಮಿಕ ಈ.ಎಂ ಭರತ್(21) ಎಂಬವರನ್ನು ಬಂಧಿಸಿ ಅವರಿಂದ ಸುಮಾರು ರೂ. 1,94,200 ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದ ನಿವಾಸಿ ಕರ್ತಂಡ ಎಂ ಮಾಚವ್ವ ಎಂಬವರು ಮೇ 19ರಂದು ಮನೆಗೆ ಬೀಗ ಹಾಕಿಕೊಂಡು ಗೋಣಿಕೊಪ್ಪದಲ್ಲಿರುವ ತನ್ನ ಮಗನ ಮನೆಗೆ ಮಗನೊಂದಿಗೆ ತೆರಳಿದ್ದು, 26ರಂದು ಮಗನೊಂದಿಗೆ ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂಭಾಗದ ಬೀಗವನ್ನು ಮುರಿದು ಒಳ ನುಗ್ಗಿ ಮಲಗುವ ಕೋಣೆಯ ವಾರ್ಡ್ರೋಬ್ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಒಂದು ವಾಚನ್ನು ಕಳವು ಮಾಡಿರುವುದು ಗೋಚರಿಸಿತ್ತಲ್ಲದೆ, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಮಡಿಕೇರಿ ಉಪ ವಿಭಾಗದ ಪೊಲಿಸ್ ಉಪ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಅವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಆರ್. ಕಿರಣ್, ಸಿಬ್ಬಂದಿಯವರಾದ ಫ್ರಾನ್ಸಿಸ್, ಮಧುಸೂದನ್, ನವೀನ್, ಹರ್ಷ, ಕಾಳಿಯಪ್ಪ, ಪ್ರೇಂ ಕುಮಾರ್, ದೇವರಾಜು ಎ.ಎಸ್.ಐ.ಗಳಾದ ಜ್ಯೋತಿಕುಮಾರ್, ಕುಶಾಲಪ್ಪ ಅವರುಗಳನ್ನೊಳಗೊಂಡ ತಂಡ ಅಪರಾಧ ಪತ್ತೆ ಕಾರ್ಯ ಕೈಗೊಂಡು ಮೇ ೩೦ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಡಂಗ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ತನಿಖೆ ಮಾಡಿ ಆರೋಪಿಗಳನ್ನು ಮತ್ತು ಕಳವು ಮಾಲನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಶ್ಲಾಘಿಸಿದ್ದಾರೆ.