ಮಡಿಕೇರಿ: ಪ್ರತಿ ಮಳೆಗಾಲದಲ್ಲಿ ಹಳ್ಳಕೊಳ್ಳಗಳಾಗುವ ಕುಂಬಳದಾಳು ಗ್ರಾಮದ ರಸ್ತೆಯಲ್ಲಿ ಸುಗಮ ಸಂಚಾರ ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲೂಕಿನ ಕುಂಬಳದಾಳು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಉತ್ತಮ ದರ್ಜೆಯ ರಸ್ತೆಯನ್ನಾಗಿ ಮಾಡುವ ನಿಟ್ಟಿನಲ್ಲಿ 2018ರ ಫೆಬ್ರವರಿಯಲ್ಲಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು ನಂತರ 2019ರಲ್ಲಿ ಕಾಮಗಾರಿಯನ್ನೂ ಆರಂಭಿಸಲಾಯಿತು.
ಆದರೆ ಸರಕಾರ ಬದಲಾವಣೆಯಾದಂತೆ ಕಾಮಗಾರಿಯೂ ಸ್ಥಗಿತಗೊಂಡಿತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು. ಅಲ್ಲದೆ ಗುಂಡಿಬಿದ್ದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮದ ಪ್ರಮುಖರು ಆರೋಪಿಸಿದ್ದಾರೆ.
ಗ್ರಾಮಸ್ಥರ ಒತ್ತಾಯದ ಮೇರೆಗೆ ಗುಂಡಿಗಳನ್ನು ಜಲ್ಲಿಯಿಂದ ಮುಚ್ಚಿದ್ದು, ಅಲ್ಲಲ್ಲಿ ಮಣ್ಣು ರಾಶಿಯನ್ನು ಸುರಿಯಲಾಗಿದೆ. ಜೂನ್ ತಿಂಗಳಿನಿಂದ ಮಳೆ ಪ್ರಾರಂಭವಾಗಲಿದ್ದು, ರಸ್ತೆಗಳಲ್ಲಿ ನೀರು ನಿಂತು ಕೆಸರುಮಯವಾಗಲಿದೆ. ಇದರಿಂದ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.