ಮಡಿಕೇರಿ: ಕೋವಿಡ್-19 ನಿಯಂತ್ರಿಸುವಲ್ಲಿ ಕೊರೊನಾ ವಾರಿಯರ್ಸ್ ಅವರ ಪಾತ್ರ ಅತಿಮುಖ್ಯವಾಗಿದ್ದು, ಅವರುಗಳ ಆರೋಗ್ಯವೂ ಅಷ್ಟೇ ಅಮೂಲ್ಯವಾದುದು ಎಂದು ಶಾಸಕ ಎಂ.ಪಿ.ಅಪಚ್ಚು ರಂಜನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೋನಾ ವಾರಿಯರ್ಸ್ಗಳಿಗೆ ಕೋವಿಡ್-19 ರೋಗ ನಿರೋಧಕ ಔಷಧ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋವಿಡ್-19 ರ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆ ಔಷಧಿ ವಿತರಿಸುತ್ತಿದ್ದು, ಇವುಗಳನ್ನು ಪ್ರತಿನಿತ್ಯ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದರು.
ಸಾರ್ವಜನಿಕರ ಸೇವೆಯಲ್ಲಿರುವ ಕೊರೋನಾ ವಾರಿಯರ್ಸ್ಗಳ ಆರೋಗ್ಯವು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೋಮಿಯೋಪತಿ, ಯುನಾನಿ, ಆಯುರ್ವೇದ ಇವುಗಳ ಸಂಯುಕ್ತ ಔಷಧವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಾಗಿ ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಆಯುಷ್ ಇಲಾಖೆಯು ಕೊರೋನಾ ವಾರಿಯರ್ಸ್ಗಳಿಗೆ ರೋಗ ನಿರೋಧಕ ಔಷಧವನ್ನು ನೀಡುತ್ತಿದ್ದು, ಇದನ್ನು ಪ್ರತಿಯೊಬ್ಬ ಕೊರೋನಾ ವಾರಿಯರ್ಸ್ಗಳು ವೈದ್ಯರ ಸಲಹೆಯಂತೆ ಸೇವನೆ ಮಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು, ಕೊರೋನಾ ವಾರಿಯರ್ಸ್ಗಳಿಗೆ ನೀಡುತ್ತಿರುವ ಔಷಧದ ಸೇವನೆ ಕ್ರಮ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಈ ಔಷಧದ ಮಹತ್ವವನ್ನು ತಿಳಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಕೆಎಸ್ಆರ್ಟಿಸಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹೀಗೆ ಅಗತ್ಯ ಸೇವೆ ಇಲಾಖೆಗಳ ಕೊರೋನಾ ವಾರಿಯರ್ಸ್ಗೆ ಸಾಂಕೇತಿಕವಾಗಿ ಔಷಧಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಆರ್ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಡಾ.ಮಹೇಶ್, ಡಾ.ಶುಭ, ಕೆಎಸ್ಆರ್ಟಿಸಿಯ ಹರೀಶ್ ಬಿ.ಎಚ್ ಇತರರು ಇದ್ದರು.