Wednesday, August 10, 2022

Latest Posts

ಮಡಿಕೇರಿ , ಗೋಣಿಕೊಪ್ಪದಲ್ಲಿ ಸರಳ – ಸಂಪ್ರಾದಾಯಿಕ ದಸರಾ ಆಚರಣೆಗೆ ನಿರ್ಧಾರ

ಮಡಿಕೇರಿ: ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರ ಉಪಸ್ಥಿತಿಯಲ್ಲಿ ದಸರಾ ಸಮಿತಿ ಪದಾಧಿಕಾರಿಳೊಂದಿಗೆ ಬುಧವಾರ ಪೂರ್ವಭಾವಿ
ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿ ಕೋವಿಡ್-19 ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಆ ನಿಟ್ಟಿನಲ್ಲಿ ಸಾಂಪ್ರದಾಯಿಕ ಮತ್ತು ಸರಳವಾಗಿ ದಸರಾ ಆಚರಿಸಬೇಕಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಕೋರಿದರು.
ಈಗಾಗಲೇ ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ದಸರಾ ಸಮಿತಿ ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ನಿರ್ಧಾರಗಳನ್ನು ತಿಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಬಳಿಕ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು 400-500 ವರ್ಷಗಳ ಇತಿಹಾಸವಿರುವ ಮಡಿಕೇರಿ ದಸರಾವನ್ನು ಈ ಬಾರಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ಚರ್ಚಿಸಲಾಗಿದ್ದು, ಅಕ್ಟೋಬರ್ 17 ರಂದು ಕರಗ ಉತ್ಸವ ಪಂಪಿನ ಕೆರೆಯಿಂದ ಆರಂಭಗೊಳ್ಳಲಿದೆ. ಪೂಜಾ ಕೈಂಕರ್ಯ ಮಾಡುವವರು ಮತ್ತು ಇತರರು ಸೇರಿದಂತೆ ಪೂಜಾ ಸಂದರ್ಭದಲ್ಲಿ 25 ಮಂದಿ ಇರುತ್ತಾರೆ. ಹೆಚ್ಚು ಗುಂಪು ಸೇರುವುದಿಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು ಎಂದರು.
ಕರಗವು ಆರಂಭಗೊಂಡ ನಂತರ ಕೆಲ ಮನೆಗಳಿಗೆ ತೆರಳಿ 10 ಗಂಟೆಗೆ ಕೊನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ ಅವರು ಮೆರವಣಿಗೆ ತೆರಳುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೋವಿಡ್-19 ನಿಂದ ಜನರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಅಕ್ಟೋಬರ್ 17 ರ ನಂತರ ಮರು ದಿನದಿಂದ ತೆರಳಲು ಅಭ್ಯಂತರವಿಲ್ಲ. ಆದರೆ ಆರಂಭದ ದಿನದಲ್ಲಿ ಜನದಟ್ಟಣೆ ಸೇರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ರಾಬಿನ್ ದೇವಯ್ಯ ಅವರು ಅಕ್ಟೋಬರ್ 26 ರ ವಿಜಯ ದಶಮಿಯಂದು ದಶ ಮಂಟಪಗಳು ಕಳಸ ಪ್ರತಿಷ್ಠಾಪನೆ ಮಾಡಿ ಟ್ರ್ಯಾಕ್ಟರ್ ಮೂಲಕ ಹೊರಡಲಿವೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಮೇದಪ್ಪ ಅವರು ಟ್ರ್ಯಾಕ್ಟರ್ ಬದಲಿಗೆ ಗೂಡ್ಸ್ ಆಟೋದಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ ತೆಗೆದುಕೊಂಡು ಹೋಗಬಹುದು ಎಂದು ಸಲಹೆ ಮಾಡಿದರು. ಗಣೇಶೋತ್ಸವ ರೀತಿಯಲ್ಲಿ ದಸರಾವನ್ನು ಮಾಡಬೇಕಿದೆ. ಒಟ್ಟಿಗೆ ಮೆರವಣಿಗೆ ಹೋಗಲು ಅವಕಾಶವಿಲ್ಲ ಎಂದರು.
ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಟ್ರ್ಯಾಕ್ಟರ್‍ನಲ್ಲಿ ಮೆರವಣಿಗೆಗೆ ಅವಕಾಶವಿಲ್ಲ. ದಸರಾ ಆಚರಣೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಕೋವಿಡ್ ನಿಯಂತ್ರಣ ಮಾಡಬೇಕು. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಮತ್ತು ಅರಮನೆ ಹೊರತುಪಡಿಸಿ ಬೇರೆಡೆ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅದರಂತೆ ಸರಳ ದಸರಾ ಆಚರಣೆಗೆ ಸಹಕರಿಸಬೇಕು. ಟ್ರ್ಯಾಕ್ಟರ್ ಬದಲಾಗಿ ಚಿಕ್ಕ ವಾಹನದಲ್ಲಿ ಕಳಸ ತೆಗೆದುಕೊಂಡು ಹೋಗಲು ಅವಕಾಶವಿದೆ ಎಂದು ತಿಳಿಸಿದರು.
ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಅವರು ಮಾತನಾಡಿ, ಟ್ರ್ಯಾಕ್ಟರ್ ಸಂಬಂಧಿಸಿದಂತೆ ಮತ್ತೊಮ್ಮೆ ಸಮಿತಿಯಲ್ಲಿ ಚರ್ಚಿಸಿ 2 ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಮಾಹಿತಿ ನೀಡಿದ ಬಿ.ಎನ್.ಪ್ರಕಾಶ್ ಅವರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.
ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ ಅವರು ಮಾತನಾಡಿ ಮಡಿಕೇರಿ ದಸರಾ ಸಂಬಂಧಿಸಿದಂತೆ ಅಕ್ಟೋಬರ್ 26 ರಂದು ಧಾರ್ಮಿಕ ಕೈಂಕರ್ಯಗಳನ್ನು ಬೇಗ ಆರಂಭಿಸಿ ರಾತ್ರಿ 10 ಗಂಟೆ ಒಳಗೆ ಪೂರ್ಣಗೊಳಿಸಬೇಕು ಎಂದರು.
ಈ ಸಂದರ್ಭ ಮಾತನಾಡಿದ ರವಿಕುಮಾರ್ ಅವರು,ಸೂರ್ಯಾಸ್ತಮವಾದ ನಂತರ ಪೂಜಾ ಕಾರ್ಯಕ್ರಮಗಳು ನಡೆಯುವುದರಿಂದ ಮಧ್ಯ ರಾತ್ರಿ 12 ಗಂಟೆಯ ವರೆಗೆ ಅವಕಾಶ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈಗಾಗಲೇ ದಸರಾ ಅನುದಾನ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಮಡಿಕೇರಿ ದಸರಾಗೆ 10 ಲಕ್ಷ ರೂ. ಮತ್ತು ಗೋಣಿಕೊಪ್ಪ ದಸರಾಗೆ 5 ಲಕ್ಷ ರೂ. ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಬಿನ್ ದೇವಯ್ಯ ಅವರು ತಕ್ಷಣಕ್ಕೆ ಪ್ರಸ್ತಾವನೆ ಸಲ್ಲಿಸದಂತೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ದಸರಾ ಸಮಿತಿ ಖಜಾಂಜಿ ಉಮೇಶ್ ಸುಬ್ರಮಣಿ ಅವರು 1 ಕರಗಕ್ಕೆ 5 ಲಕ್ಷ ರೂ. ವೆಚ್ಚವಾಗಲಿದೆ ಆದ್ದರಿಂದ ಪ್ರಸ್ತಾವನೆಯನ್ನು ತಕ್ಷಣಕ್ಕೆ ಸಲ್ಲಿಸದಂತೆ ಕೋರಿದರು.
ಈ ಬಗ್ಗೆ ಸೋಮವಾರದೊಳಗೆ ಮಾಹಿತಿ ತಿಳಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು. ಕರಗ ತೆರಳುವ ಮಾರ್ಗದಲ್ಲಿ ಬೀದಿ ದೀಪ ಅಳವಡಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಡಿವೈಎಸ್ಪಿ ಜಯಕುಮಾರ್, ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ದಸರಾ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತರಾದ ರಾಮದಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನ, ದಸರಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss