Sunday, July 3, 2022

Latest Posts

ಮಡಿಕೇರಿ: ಪ್ರಧಾನಮಂತ್ರಿ ಪರಿಹಾರ ನಿಧಿ ಬಿಜೆಪಿ ಕಾರ್ಯಕರ್ತರಿಂದ 18 ಲಕ್ಷ ರೂ ದೇಣಿಗೆ ಸಂಗ್ರಹ

ಮಡಿಕೇರಿ : ವಿಶ್ವದಾದ್ಯಂತ ಕೋವಿಡ್-19 ಹರಡುತ್ತಿರುವ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಘೋಷಿಸಿದ್ದು, ನಾಗರಿಕರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಬೂತ್ ಮಟ್ಟದಲ್ಲಿ ಕನಿಷ್ಟ ೧೦೦ ರೂ. ಸಂಗ್ರಹಿಸಿ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ಕಳುಹಿಸುವಂತೆ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅಂತರ ಕಾಯ್ದುಕೊಂಡು, ಬಿಜೆಪಿ ಕಾರ್ಯಕರ್ತರ ಮನೆ ಮನೆಗೆ ತೆರಳಿ 100 ರೂ. ಸಂಗ್ರಹಿಸುತ್ತಿದ್ದಾರೆ. ಇದುವರೆಗೆ ಒಟ್ಟು 18 ಲಕ್ಷ ರೂ. ಗಳಿಗೂ ಅಧಿಕ ಹಣ ಸಂಗ್ರಹಿಸಿ, ಪ್ರಧಾನಮಂತ್ರಿ ಅವರ ಪರಿಹಾರ ನಿಧಿಗೆ ಕಳುಹಿಸಲಾಗಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಅವರು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರಧಾನ ಮಂತ್ರಿ ಅವರ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುವುದನ್ನು ಸಹಿಸದ ಕೆಲವರು ತಪ್ಪು ಮಾಹಿತಿಯೊಂದಿಗೆ ಜಿಲ್ಲಾಧಿಕಾರಿ ಅವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದು ಸರಿಯಲ್ಲ ಎಂದು ಕೆ.ಜಿ ಬೋಪಯ್ಯ ಅವರು ಕಿಡಿಕಾರಿದ್ದಾರೆ.
ದೂರನ್ನು ಆಧರಿಸಿ ಚಲಾವರ ಗ್ರಾಮದ ಬೂತ್ ಸಮಿತಿಯ ಅಧ್ಯಕ್ಷ ಕುಟ್ಟನ ರಾಧಾಕೃಷ್ಣ (ರವಿ) ಅವರ ಮನೆಗೆ ನಾಪೋಕ್ಲುವಿನ ಪೊಲೀಸರು ರಾತ್ರಿ ೮.೩೦ ಗಂಟೆ ವೇಳೆಯಲ್ಲಿ ಏಕಾಏಕಿ ದಾಳಿ ಮಾಡಿ, ಬೆದರಿಕೆ ಒಡ್ಡಿದ್ದಾರೆ. ಜೊತೆಗೆ ಪರಿಹಾರ ನಿಧಿಯ ಪುಸ್ತಕವನ್ನು ಸಹ ವಶಪಡಿಸಿಕೊಂಡಿದ್ದಾರೆ. ಡಿವೈಎಸ್‌ಪಿ ಅವರ ಮುಂದೆ ಹಾಜರು ಪಡಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಣಿಗೆ ಸಂಗ್ರಹಿಸಲು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ದೇಣಿಗೆ ಸಂಗ್ರಹದ ಬಗ್ಗೆ ಇಡೀ ದೇಶದ ಜನತೆಗೆ ಹೇಳಬೇಕಿತ್ತು ಎಂದು ವಿರೋಧ ಪಕ್ಷದವರು ಟೀಕಿಸಿದ್ದರು ಎಂಬುದನ್ನು ಸ್ಮರಿಸಿರುವ ಬೋಪಯ್ಯ, ಪ್ರಧಾನಮಂತ್ರಿಯವರ ಸಂದೇಶದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ದಾನಿಗಳಿಂದ ಪರಿಹಾರ ನಿಧಿಗೆ ಪ್ರಾಮಾಣಿಕವಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ ಪೊಲೀಸರು ಈ ರೀತಿ ತಪ್ಪು ಮಾಹಿತಿ ಪಡೆದು ಬೂತ್ ಮಟ್ಟದ ಅಧ್ಯಕ್ಷರ ಮನೆಗೆ ತೆರಳಿ ಆಪಾದನೆ ಮಾಡಿರುವುದು ಸರಿಯಲ್ಲ. ಇಂತಹ ಪ್ರಕರಣ ಇನ್ನು ಮುಂದೆ ಕಂಡು ಬರಬಾರದು. ಜಿಲ್ಲಾಡಳಿತ ಈ ಸಂಬಂಧ ಎಚ್ಚರಿಕೆ ವಹಿಸಬೇಕು. ಜೊತೆಗೆ ಸುಳ್ಳು ದೂರು ನೀಡಿದ ಪಟ್ಟಚರವಂಡ ಸುಬ್ಬಯ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss